ಚಿಂಚೋಳಿ ಪುರಸಭೆ ಫಾರಂ-3ಗೆ ಹಣದ ಬೇಡಿಕೆ ಹೆಚ್ಚಾಗಿದೆ: ಆರೋಪ

KannadaprabhaNewsNetwork | Published : Jul 12, 2024 1:33 AM

ಸಾರಾಂಶ

ಪುರಸಭೆಯಿಂದ ಫಾರಂ ೩ ನೀಡುವುದಕ್ಕಾಗಿ ಇಲ್ಲಿಗೆ ಲೂಟಿ ಮಾಡಲು ಬಂದಿದ್ದೀರಾ? ನಿಮ್ಮ ಸಿಬ್ಬಂದಿ ಬಗ್ಗೆ ಅನೇಕರು ದೂರು ನೀಡುತ್ತಿದ್ದಾರೆ. ಸರಕಾರ ಸಂಬಳ ಕೊಡುವುದಿಲ್ಲವಾ? ಜನರ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಇಲ್ಲವೇ ಬೇರೆಡೆ ವರ್ಗಾವಣೆ ಮಾಡಿಕೊಳ್ಳಿ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಸ್ಥಳೀಯ ಪುರಸಭೆಯಲ್ಲಿ ಸಾರ್ವಜನಿಕರ ಆಸ್ತಿ ನೋಂದಣಿ ಮತ್ತು ಫಾರ.೩ ಕೊಡುವುದಕ್ಕಾಗಿ ಸಾರ್ವಜನಿಕರಿಂದ ಹೆಚ್ಚಿನ ಹಣದ ಬೇಡಿಕೆ ಇಡಲಾಗುತ್ತಿದೆ. ಪುರಸಭೆಯಿಂದ ಫಾರಂ ೩ ನೀಡುವುದಕ್ಕಾಗಿ ಇಲ್ಲಿಗೆ ಲೂಟಿ ಮಾಡಲು ಬಂದಿದ್ದೀರಾ? ನಿಮ್ಮ ಸಿಬ್ಬಂದಿ ಬಗ್ಗೆ ಅನೇಕರು ದೂರು ನೀಡುತ್ತಿದ್ದಾರೆ. ಸರಕಾರ ಸಂಬಳ ಕೊಡುವುದಿಲ್ಲವಾ? ಜನರ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಇಲ್ಲವೇ ಬೇರೆಡೆ ವರ್ಗಾವಣೆ ಮಾಡಿಕೊಳ್ಳಿ. ಪುರಸಭೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ತನಿಖೆ ನಡೆಸುತ್ತೇನೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಖಡಕ್ ಎಚ್ಚರಿಕೆ ನೀಡಿದರು.

ಚಿಂಚೋಳಿ ಪುರಸಭೆ ಸಭಾಂಗಣದಲ್ಲಿ ಗುರುವಾರ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಚಿಂಚೋಳಿ ಪುರಸಭೆಯಲ್ಲಿದ್ದ ಕೆಲವು ಸಿಬ್ಬಂದಿಗಳಾದ ನಿಂಗಮ್ಮ ಬೀರಾದಾರ, ಎಜಾಜ್ ಇವರು ಫಾರಂ ೩ ನೀಡುವುದಕ್ಕಾಗಿ ಹಣದ ಬೇಡಿಕೆ ಇಡುತ್ತಿದ್ದಾರೆಂದು ಅನೇಕರು ಲಿಖಿತವಾಗಿ ನಿಮ್ಮ ವಿರುದ್ಧ ದೂರು ನೀಡಿದ್ದಾರೆ. ಪುರಸಭೆಯಲ್ಲಿ ಆಡಳಿತಾಧಿಕಾರಿ ಆಗಿರುವುದರಿಂದ ಜನರ ಸಮಸ್ಯೆಗೆ ಸ್ಪಂದನೇ ಸರಿಯಾಗಿ ಸಿಗುತ್ತಿಲ್ಲ ಪುರಸಭೆ ವ್ಯಾಪ್ತಿಯಲ್ಲಿ ಕರ್ನಾಟಕ ಮೂಲಭೂತ ಸೌಕರ್ಯ ನಿಗಮ(ಲ್ಯಾಂಡ ಆರ್ಮಿ)ವತಿಯಿಂದ ರಂಗ ಮಂದಿರ, ಶಾಪಿಂಗ್‌ ಕಾಂಪ್ಲೆಕ್ಸ ಸೇರಿದಂತೆ ಚರಂಡಿ ಕಾಮಗಾರಿಗಳು ಮೈಕ್ರೋ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕೆಲಸಗೂ ನನೆಗುದಿಗೆ ಬಿದ್ದಿವೆ ಎಂದು ಪುರಸಭೆ ಇದರ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಶಾಸಕರು ತಿಳಿಸಿದರು.

ಕರ್ನಾಟಕ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದಿಂದ ಕೆಲಸಗಳು ಚಿಂಚೋಳಿ, ಆಳಂದ, ಅಫಜಲ್ಪುರ ತಾಲೂಕುಗಳನ್ನು ಸೇರಿಕೊಂಡ ಒಂದೇ ಖಾತೆ ಇರುವುದರಿಂದ ನಮ್ಮ ತಾಲೂಕಿನ ಅಭಿವೃದ್ಧಿ ಕೆಲಸಗಳ ಅನುದಾನ ಬೇರೆಡೆ ಬಳಕೆ ಮಾಡಿಕೊಂಡಿರುವುದರಿಂದ ನಮ್ಮ ತಾಲೂಕಿನ ಅಭಿವೃದ್ಧಿ ಕೆಲಸ ಇನ್ನೂ ಅಪೂರ್ಣವಾಗಿ ಉಳಿದಿವೆ ಎಂದು ಹೇಳಿದರು.

ಪಟ್ಟಣದಲ್ಲಿ ಡೆಂಘೀ ರೋಗ ಹರಡದಂತೆ ಎಲ್ಲ ವಾರ್ಡ್‌ಳಲ್ಲಿ ಚರಂಡಿ ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ಬ್ಲಿಚಿಂಗ್‌ ಪೌಡರ್‌ ಸಿಂಪರಣೆ ಮತ್ತುಫಾಗಿಂಗ ನಡೆಸಲು ಮುಖ್ಯಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಇದಗಾ ಮೈದಾನ ಹತ್ತಿರ ಮತ್ತು ಹೊಸ ಊರಿನಲ್ಲಿ ಬಡವರಿಗಾಗಿ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯಿಂದ ೨೦೦ಕ್ಕೂ ಹೆಚ್ಚು ಮನೆಗಳ ೨೦ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಆದರೆ, ಅವುಗಳು ಇನ್ನುವರೆಗೆ ಬಡವರಿಗೆ ಹಂಚಿಕೆ ಮಾಡಿ ಹಕ್ಕುಪತ್ರ ವಿತರಣರೆ ಮಾಡಿರುವುದಿಲ್ಲ ಯಾಕೇ ಎಂದು ಮುಖ್ಯಾಧಿಕಾರಿಗಳನ್ನು ಶಾಸಕರು ಕೇಳಿದಾಗ ಮುಖ್ಯಾಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ. ಜನಸ್ಪಂದನಾ ಸಭೆಯಲ್ಲಿ ಜನರ ಸಮಸ್ಯೆಗಳ ಬೇಗನೆ ಇತ್ಯರ್ಥಿಪಡಿಸಬೇಕು. ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿವ ಶುದ್ಧ ನೀರು ಪೂರೈಕೆ ಮತ್ತು ಚರಂಡಿ ಬ್ಲಿಚಿಂಗ್‌ ಪೌಡರ್‌ ಸಿಂಪರಣೆ ಮತ್ತು ವಿದ್ಯುತ್‌ ದೀಪಗಳ ವ್ಯವಸ್ಥೆ ಸರಿಯಾಗಿ ಒದಗಸಬೇಕೆಂದು ಎಂದು ಶಾಸಕ ಡಾ. ಅವಿನಾಶ ಜಾಧವ್ ಮುಖ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸೂಚಿಸಿದರು.

ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಮಾತನಾಡಿ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ ಕುಡಿವ ನೀರು ರಸ್ತೆ ಚರಂಡಿ ಇವುಗಳ ಬಗ್ಗೆ ಗಮನಹರಿಸಲಾಗುತ್ತಿದೆ ಎಂದರು.

ಪುರಸಭೆ ಸದಸ್ಯ ಆನಂದ ಟೈಗರ್‌ ಮಾತನಾಡಿ, ಹೊಸ ಊರಲ್ಲಿ ನೀರಿನ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ ಬಡವರ ಮನೆಗಳ ನೀರು ಸರಿಯಾಗಿ ಬರುತ್ತಿಲ್ಲ. ಕಟ್ಟಡ ಪರವಾನಿಗೆ ಇಲ್ಲದೇ ಮನೆ ನಿರ್ಮಾಣ ನಡೆಯುತ್ತಿದ್ದೆ. ಸ್ಲಂ ಬೋರ್ಡ್‌ ಮನೆಗಳ ದುರಸ್ತಿ ನಡೆಯುತ್ತಿಲ್ಲ ದೂರಿದರು.

ದಲಿತ ಮುಖಂಡ ಗೋಪಾಲರಾವ ಕಟ್ಟಿಮನಿಯವರು ಮಾತನಾಡಿ, ಪುರಸಭೆಯಲ್ಲಿ ಅಧ್ಯಕ್ಷ/ಉಪಾಧ್ಯಕ್ಷ ಇನ್ನು ಆಯ್ಕೆಯಾಗಿಲ್ಲ ಸೇಡಂ ಸಹಾಯಕ ಆಯುಕ್ತರು ಆಡಳಿತಾಧಿಕಾರಿ ಕೆಲಸ ಮಾಡುತ್ತಿದ್ದಾರೆ. ಬೇಜವ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಪುರಸಭೆ ಅನಾಥವಾಗಿದೆ ಮುಖ್ಯಾಧಿಕಾರಿ ಕೆಲವರ ಮಾತುಗಳನ್ನು ಕೇಳಿ ಇನ್ನಿತರ ಸದಸ್ಯರಿಗೆ ನಿರ್ಲಕ್ಷತನ ಮಾಡುತ್ತಿದ್ದಾರೆ ಹೇಳಿದರು.

ಸಭೆಯಲ್ಲಿ ಗ್ರೇಡ-ತಹಸೀಲ್ದಾರ ವೆಂಕಟೇಶ ದುಗ್ಗನ, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಪುರಸಭೆ ಸದಸ್ಯರಾದ ರೂಪಕಲಾ ಕಟ್ಟಿಮನಿ, ರಾಧಮ್ಮ ವಲಗಿರಿ, ಅನವರ ಖತೀಬ, ಶಿವಕುಮಾರ ಪೋಚಾಲಿ, ಜಗನ್ನಾಥ ಗುತ್ತೆದಾರ, ಅಬ್ದುಲ ಬಾಸೀತ, ಬಸವರಾಜ ಶಿರಸಿ, ನಾಗೇಂದ್ರ ಗುರಂಪಳ್ಳಿ, ಜೆಇ ದೇವೇಂದ್ದಪ್ಪ ಕೋರವಾರ, ನಿಂಗಮ್ಮ ಬೀರಾದಾರ, ಅಧಿಕಾರಿಗಳಾದ ಗಿರಿರಾಜ ಸಜ್ಜನ, ಡಾ. ಸಂತೋಷ ಪಾಟೀಲ, ಡಾ. ಮಹಮ್ಮದ ಗಫಾರ, ಎಇಇ ಬಸವರಾಜ ಬೈನೂರ, ಗೌತಮ ಬೊಮ್ಮನಳ್ಳಿ, ರಾಜಕುಮಾರ ಪವಾರ, ಸಂತೋಷ ಗಡಂತಿ ಇನ್ನಿತರ ಭಾಗವಹಿಸಿದ್ದರು.

Share this article