ಆಶಾಗಳಿಗೆ ಮಾಸಿಕ 10ಸಾವಿರ ರು ಗೌರವ ಧನಕ್ಕೆ ಆಗ್ರಹ

KannadaprabhaNewsNetwork | Published : Mar 20, 2025 1:16 AM

ಸಾರಾಂಶ

ಮಾಸಿಕ ಕನಿಷ್ಠ 10 ಸಾವಿರ ರು. ಗೌರವ ಧನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ನೇತೃತ್ವದಲ್ಲಿ ಬುಧವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಎಐಯುಟಿಯುಸಿ ವತಿಯಿಂದ ಚಿತ್ರದುರ್ಗದಲ್ಲಿ ಪ್ರತಿಭಟನೆ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾಸಿಕ ಕನಿಷ್ಠ 10 ಸಾವಿರ ರು. ಗೌರವ ಧನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ನೇತೃತ್ವದಲ್ಲಿ ಬುಧವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ವಿಜಯಕುಮಾರ್, ಕಳೆದ ಜನವರಿ 7 ರಿಂದ 10 ರವರೆಗೆ ಆಶಾ ಕಾರ್ಯಕರ್ತೆಯರು ಆಹೋರಾತ್ರಿ ಹೋರಾಟ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಅವರು ಆಶಾ ಕಾರ್ಯಕರ್ತೆಯರ ಕರೆಯಿಸಿ ಮಾತುಕತೆ ನಡೆಸಿದ್ದರು. ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ ನಿಂದ ಮಾಸಿಕ 10 ಸಾವಿರ ಗೌರವ ಧನದ ಜೊತೆಗೆ ಕಾಂಪೋನೆಂಟ್‍ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್ ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, 10,000 ರು. ಗ್ಯಾರಂಟಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು ಎಂದಿದ್ದರು. ಮುಖ್ಯಮಂತ್ರಿಗಳು ನೀಡಿದ ಭರವಸೆ ಇನ್ನೂಜಾರಿಗೆ ಬಂದಿಲ್ಲ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿಲ್ಲವೆಂದು ದೂರಿದರು.

ಬಜೆಟ್ ಮಂಡನೆ ನಂತರ ಸಂಘಟನೆ ವತಿಯಿಂದ ಆರೋಗ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸಂಘದಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಟ 10000 ರು. ಗೌರವಧನವನ್ನು ನೀಡಲಾಗುವ ಕುರಿತು ಸ್ಪಷ್ಟೀಕರಣ ಕೇಳಿರುತ್ತೇವೆ. ಈ ವರೆಗೂ ಉತ್ತರ ಬಂದಿಲ್ಲವೆಂದರು.

ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ ಇದೇ ಆಯವ್ಯಯ ಪೂರ್ವಭಾವಿ ಸಭೆಯನ್ನು ಸಂಘದೊಂದಿಗೆ ನಡೆಸಿಲ್ಲ. ಈ ಆಯವ್ಯಯದಲ್ಲಿ ರಾಜ್ಯದ ಸುಮಾರು 2,50,000 ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ 1000 ರು. ಹೆಚ್ಚಿಸಿದಂತೆ 42000 ಆಶಾ ಕಾರ್ಯಕರ್ತೆಯರಿಗೂ 1000 ರು. ಹೆಚ್ಚಿಸಿ ಇದೇ ಬಜೆಟ್‍ನಲ್ಲಿ ಸೇರಿಸಿ ಆದೇಶಿಸಬೇಕಾಗಿದೆ.

ಆಶಾ ಕಾರ್ಯಕರ್ತೆಯರಲ್ಲೇ 20 ಆಶಾಗಳಿಗೆ ಒಬ್ಬರಂತೆ ಆಶಾ ಸುಗಮಕಾರರನ್ನು ನೇಮಿಸಿಕೊಂಡು ಕಳೆದ 12 ವರ್ಷಗಳಿಂದ ಇವರಿಂದ ಮಾಸಿಕ ಕೇವಲ 6000 ರು. ನೀಡಿ ಕೆಲಸ ತೆಗೆದುಕೊಂಡಿರುತ್ತಾರೆ. ಏಕಾಏಕಿಯಾಗಿ ಆಶಾ ಸುಗಮಕಾರರನ್ನು ಕೆಲಸದಿಂದ ಕೊನೆಗೊಳಿಸಿ ಆದೇಶ ಹೊರಡಿಸಿರುುವುದು ಆಘಾತಕಾರಿ ಸಂಗತಿ.

60 ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಕೊನೆಗೊಳಿಸಿರುವುದಾಗಿ ಹೇಳಿ ಕಳೆದ 16 ವರ್ಷಗಳಿಂದ ಆಶಾ ಕೆಲಸ ಮಾಡುತ್ತಿರುವವರನ್ನು ದಿಢೀರನೆ ಬೀದಿಗೆ ತಳ್ಳಿರುತ್ತಾರೆ. ವಿವಿಧ ರಾಜ್ಯಗಳಲ್ಲಿ ಇವರ ಸೇವೆಯ ವಯಸ್ಸು 62 ಇದ್ದು, ಕರ್ನಾಟಕ ರಾಜ್ಯದಲ್ಲಿಯೂ ನಿವೃತ್ತಿ ವಯಸ್ಸನ್ನು 62 ಕ್ಕೆ ಹೆಚ್ಚಿಸಿ ಮರು ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಆಶಾ ಸಂಘದ ಸದಸ್ಯರಾದ ಗುರುಶಾಂತ, ನಾಗವೇಣಮ್ಮ, ಮಂಜುಳಾ, ಕಾವೇರಿ, ಬೋರಮ್ಮ, ಮಾದೇವಿ, ಮಮತಾ ಚಿತ್ರಹಳ್ಳಿ, ಸುನಿತಾ ಹೊಸದುರ್ಗ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Share this article