ಕನ್ನಡಪ್ರಭ ವಾರ್ತೆ, ಚಿತ್ರದುರ್ಗಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ರನ್ನು ತಕ್ಷಣವೇ ಬಂಧಿಸಬೇಕೆಂದು ಬಹುಜನ ಸಮಾಜ ಪಕ್ಷ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಬಸವಣ್ಣ, ಕುವೆಂಪು, ಶಿಶುನಾಳ ಶರೀಫ, ಅಕ್ಕ ಮಹಾದೇವಿ, ಯೋಗಿ ವೇಮಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರಂತಹ ಸಂತಶ್ರೇಷ್ಠರು, ರಾಜರ್ಷಿಗಳು, ತತ್ವ ಜ್ಞಾನಿಗಳು ಮತ್ತು ಆದರ್ಶವಾದಿ ಮಹನೀಯರು ಜನಿಸಿದ ಕರ್ನಾಟಕದ ಶ್ರೇಷ್ಠ ಸಂಸ್ಕೃತಿಗೆ ಮಸಿ ಬಳಿಯುವಂತಹ ಅಪಮಾನಕರ ಘಟನೆಗಳು ಬೆಳಕಿಗೆ ಬಂದಿವೆ. ಸಮಾಜಕ್ಕೆ ಸನ್ಮಾರ್ಗ ತೋರಬೇಕಾದ ಸ್ವಾಮೀಜಿಗಳು ಮತ್ತು ಸಮಾಜ ಮುನ್ನಡೆಸಬೇಕಾದ ರಾಜಕಾರಣಿಗಳೇ ಇಂದು ಅನೈತಿಕ ದಾರಿ ತುಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಪ್ರಗತಿಪರ ಸ್ವಾಮೀಜಿ ಎಂಬ ಹೆಸರು ಗಳಿಸಿದ್ದ ಶಿವಮೂರ್ತಿ ಶರಣರು ತಮ್ಮ ಮಠದ ವಿದ್ಯಾರ್ಥಿ ನಿಲಯದ ಹೆಣ್ಣು ಮಕ್ಕಳನ್ನು ತಮ್ಮ ಕಾಮಕ್ಕೆ ದುರ್ಬಳಕೆ ಮಾಡಿಕೊಂಡಿದ್ದು ನಾಡಿನ ಸಭ್ಯಸ್ಥರೆಲ್ಲರೂ ತಲೆತಗ್ಗಿಸುವಂತೆ ಮಾಡಿತ್ತು. ಇದೀಗ ನಾಡಿನ ಅತ್ಯಂತ ಹಿರಿಯ ರಾಜಕಾರಣಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುಡಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ತಂದೆ ಶಾಸಕ ರೇವಣ್ಣ ಹಲವಾರು ಅಮಾಯಕ ಹೆಣ್ಣು ಮಕ್ಕಳ ವಿರುದ್ಧ ನಡೆಸಿರುವ ಲೈಂಗಿಕ ದೌರ್ಜನ್ಯ ನಾಡಿನ ಮಾನ ಹರಾಜು ಹಾಕಿದೆ ಎಂದು ಬಿಎಸ್‌ಪಿ ಆರೋಪಿಸಿದೆ.ಮಹಿಳೆಯರ ಮಾನ-ಪ್ರಾಣ ರಕ್ಷಣೆಯ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಯವರು ತಮ್ಮ ಪಾಲುದಾರ ಪಕ್ಷದ ಅಭ್ಯರ್ಥಿಯ ಲೈಂಗಿಕ ಪುರಾಣ ಬೀದಿಬೀದಿಗಳಲ್ಲಿ ಹರಾಜಾಗುತ್ತಿದ್ದರೂ ಅದರ ಬಗ್ಗೆ ಜಾಣ ಮೌನ ವಹಿಸಿರುವುದು ತರವಲ್ಲದ ನಡವಳಿಕೆಯಾಗಿದೆ.
ದೇವೇಗೌಡರ ಕುಟುಂಬದ ಕುಡಿಯ ಅನೈತಿಕತೆಯ ಬಗ್ಗೆ ತಮಗೆ ಮೊದಲೇ ತಿಳಿದ್ದಿದ್ದರೂ, ಕೇಂದ್ರದ ಗೃಹಮಂತ್ರಿ ಅಮಿತ್ ಷಾ, ಪ್ರಜ್ವಲ್ ರೇವಣ್ಣನಿಗೆ ಟಿಕೆಟ್ ನೀಡಿರುವುದು ನಾಚಿಕೆ ಗೇಡಿನ ಸಂಗತಿ. ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈ ಹಗರಣವುಳ್ಳ ಪೆನ್ ಡ್ರೈವ್ ಬಹಿರಂಗ ಮಾಡಿರುವುದು ಯಾರು? ಹಂಚಿರುವುದು ಯಾರು? ಎಂದು ಕೇಳುವುದರ ಮೂಲಕ, ಪ್ರಜ್ವಲ್ ರೇವಣ್ಣ ಲಂಪಟತನ ಮಾಡಿರುವುದು ನಿಜವೆಂದು ಒಪ್ಪಿಕೊಂಡಿದ್ದಾರೆ. ತನಿಖೆಯ ದಿಕ್ಕನ್ನು ಬದಲಾಯಿಸಲು ಯತ್ನಿಸಿದ್ದಾರೆ. ಇಂತಹ ದೊಡ್ಡ ಲಂಪಟ ಸದಸ್ಯನನ್ನು ಅಮಾನತ್ತು ಮಾಡುವುದು ದೊಡ್ಡ ಶಿಕ್ಷೆಯಾಗದು.ಸಿದ್ಧರಾಮಯ್ಯನವರ ಸರ್ಕಾರ ಈ ಪ್ರಕರಣವನ್ನು ಎಸ್ಐಟಿ ಗೆ ಒಪ್ಪಿಸಿದ್ದು ತನಿಖೆ ನಿಷ್ಪಕ್ಷಪಾತವಾಗಿ ನಡೆಯುವಂತೆಯೂ, ಯಾವುದೇ ಕಾರಣಕ್ಕೂ ಸಾಕ್ಷ್ಯಗಳು ನಾಶವಾಗದಂತೆಯೂ ನೋಡಿಕೊಳ್ಳಬೇಕಿದೆ. ಕಾನೂನಿನ ಮುಂದೆ ಎಷ್ಟೇ ದೊಡ್ಡ ವ್ಯಕ್ತಿಯಾದರೂ ತಲೆ ತಗ್ಗಿಸಿ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕೆಂಬುದನ್ನು ನಿರೂಪಿಸಬೇಕಾದದ್ದು ಸರ್ಕಾರದ ಜವಾಬ್ಧಾರಿ. ಆರೋಪಿ ಪ್ರಜ್ವಲ್ ರೇವಣ್ಣ ನನ್ನು ಕೊಡಲೇ ಬಂಧಿಸಿ ಜೈಲಿಗೆ ಕಳಿಸಬೇಕು. ಸಂತ್ರಸ್ತ ಮಹಿಳೆಯರಿಗೆ ಸಂಪೂರ್ಣ ರಕ್ಷಣೆ ನೀಡಬೇಕೆಂದು ಒತ್ತಾಯಿಸಿತ್ತೇವೆಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ತಾಲೂಕು ಅಧ್ಯಕ್ಷೆ ಲಕ್ಷ್ಮಮ್ಮ ಜಿಲ್ಲಾಧಿಕಾರಿಗೆ ಮನವಿಯಲ್ಲಿ ಆಗ್ರಹಿಸಿದ್ದಾರೆ.