ಕನ್ನಡಪ್ರಭ ವಾರ್ತೆ, ತುಮಕೂರುಯುಗಾದಿ ಹಬ್ಬದ ಮಾರನೇ ದಿನವಾದ ಇಂದು ವರ್ಷದ ತೊಡಕನ್ನು ಖುಷಿಯಿಂದ ಆಚರಿಸುತ್ತಿರುವ ಜನಸಾಮಾನ್ಯರು ಗ್ರಾಮೀಣ ಪ್ರದೇಶದ ಗುಡ್ಡೆ ಬಾಡಿಗಾಗಿ ಮುಗಿ ಬಿದ್ದಿದ್ದು, ಭಾರೀ ಬೇಡಿಕೆ ಉಂಟಾಗಿದೆ.ವರ್ಷಕ್ಕೊಮ್ಮೆ ಯುಗಾದಿ ಹಬ್ಬದ ಮಾರನೇ ದಿನದ ವರ್ಷದ ತೊಡಕಿಗೆ ಜನಸಾಮಾನ್ಯರಲ್ಲಿ ಎಲ್ಲಿಲ್ಲದ ಆಸಕ್ತಿ. ಈ ವರ್ಷದ ತೊಡಕನ್ನು ದಿನಪೂರ್ತಿ ಯಾವುದೇ ಕೆಲಸ ಕಾರ್ಯ ಇದ್ದರೂ ಬದಿಗೊತ್ತಿ ಮಾಂಸಾಹಾರ ಸೇವನೆಯಲ್ಲಿ ಕಳೆಯುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ದತಿ. ಹಾಗಾಗಿ ವರ್ಷದ ತೊಡಕು ಆಚರಣೆಗೆ ಮಾಂಸದ ಅಂಗಡಿಗಳ ಮುಂದೆ ಮುಂಜಾನೆಯಿಂದಲೇ ಸರದಿ ಸಾಲು ನಿಲ್ಲುವುದುಂಟು. ನಗರ ಪ್ರದೇಶದ ಜನತೆ ಅದೇಕೋ ಏನೋ ಮಾಂಸದ ಅಂಗಡಿಗಳ ಬಗ್ಗೆ ಒಲವು ಕಡಿಮೆ ಮಾಡಿಕೊಂಡಿದ್ದು, ಹಳ್ಳಿಗಳಲ್ಲಿ ಸಿಗುವ ಗುಡ್ಡೆ ಬಾಡಿನತ್ತ ಚಿತ್ತ ಹರಿಸಿದ್ದಾರೆ. ಯುಗಾದಿ ಹಬ್ಬ ಮುಗಿದ ಬಳಿಕ ಮಧ್ಯರಾತ್ರಿಯಿಂದ ಹಳ್ಳಿಗಳಲ್ಲಿ ಶುರುವಾಗುವ ಮೇಕೆ, ಕುರಿಗಳ ಗುಡ್ಡೆ ಮಾಂಸ ಮಾರಾಟ ಇದೀಗ ನಗರ ಪ್ರದೇಶದ ಜನರನ್ನು ಆಕರ್ಷಿಸಿದೆ. ಹೀಗಾಗಿ ನಗರದ ಜನತೆಯೂ ಸಹ ತಮಗೆ ಪರಿಚಯಸ್ಥ ಹಳ್ಳಿಗಳ ಜನರೊಂದಿಗೆ ಗುಡ್ಡೆ ಬಾಡಿಗಾಗಿ ಬುಕ್ ಮಾಡಿಕೊಂಡು ಮಧ್ಯರಾತ್ರಿಯೇ ಹಳ್ಳಿಗಳೇ ಎಡತಾಕಿದ ದೃಶ್ಯಗಳು ಸಾಮಾನ್ಯವಾಗಿದ್ದವು.
ಮಟನ್ ಸ್ಟಾಲ್ ಮುಂದೆ ಕ್ಯೂ: ಹಾಗೆಯೇ ನಗರ ಮತ್ತು ಪಟ್ಟಣ ಪ್ರದೇಶದ ಮಟನ್ ಅಂಗಡಿಗಳಲ್ಲೂ ಸಹ ಇಂದು ಚಿಕನ್ , ಮಟನ್ ವ್ಯಾಪಾರ ಭರ್ಜರಿಯಾಗಿಯೇ ನಡೆದಿದ್ದು, ಹನುಮಂತಪುರ ಸೇರಿದಂತೆ ವಿವಿಧೆಡೆ ಇರುವ ಮಾಂಸದ ಅಂಗಡಿಗಳ ಮುಂದೆ ವಿಶೇಷವಾಗಿ ಪೆಂಡಾಲ್‌ಗಳನ್ನು ಹಾಕಲಾಗಿದ್ದು, ಜನರು ಮುಂಜಾನೆಯಿಂದಲೇ ಕ್ಯೂ ನಿಂತು ಮಾಂಸ ಖರೀದಿಸಿದ ದೃಶ್ಯ ಸಾಮಾನ್ಯವಾಗಿತ್ತು. ಬೈಲರ್ ಕೋಳಿ ಕೆ.ಜಿ.ಗೆ 280, ಫಾರಂ ಕೋಳಿ ಕೆ.ಜಿ.ಗೆ 190, ಮಟನ್ ಕೆ.ಜಿಗೆ 900 ರು. ವರೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾತುಗಳು ಸಹ ಸಾರ್ವಜನಿಕರಿಂದ ಕೇಳಿ ಬಂದಿವೆ. ಒಟ್ಟಾರೆ ಬಿಸಿಲಿನ ಝಳದ ನಡುವೆಯೂ ಯುಗಾದಿ ಮತ್ತು ವರ್ಷದ ತೊಡಕನ್ನು ಸಂಭ್ರಮದಿಂದಲೇ ಆಚರಿಸಿದ್ದು ಕಂಡು ಬಂತು.