ಕನ್ನಡಪ್ರಭ ವಾರ್ತೆ ಟಿ. ನರಸೀಪುರನಾಗಮೋಹನ್ ದಾಸ್ ವರದಿಯಲ್ಲಿ ಬಲಗೈ ಸಮುದಾಯದ ಹಿತಾಸಕ್ತಿಯನ್ನು ಕಡೆಗಣಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಮಾ. 23 ರಂದು ಪರಿಶಿಷ್ಟ ಬಲಗೈ ಜಾತಿ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ ಹೇಳಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕರೆಯಲಾಗಿದ್ದ ಪರಿಶಿಷ್ಟ ಬಲಗೈ ಜಾತಿ ಒಳ ಮೀಸಲಾತಿ ಹೋರಾಟ ಸಮಿತಿಯ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ನಾಗಮೋಹನ್ ದಾಸ್ ಅವರ ವರದಿ ಸಂಪೂರ್ಣವಾಗಿ ಅವೈಜ್ಞಾನಿಕ ಹಾಗೂ ದೋಷ ಪೂರಿತವಾಗಿ ಕೂಡಿದ್ದು, ಇದು ಎಡಗೈ ಸಮಾಜದ ಹಿತಾಸಕ್ತಿಗೆ ಪೂರಕವಾಗಿ ನೀಡಿದ ವರದಿಯಾಗಿದೆ. ವರದಿಯು ಬಲಗೈ ಸಮಾಜದವರನ್ನು ತುಳಿಯಲು ಸಿದ್ದಪಡಿಸಿರುವಂತಿದೆ ಎಂದು ಆರೋಪಿಸಿದರು. ಈ ನಿಟ್ಟಿನಲ್ಲಿ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ಮಾಡುವುದು ಅನಿವಾರ್ಯವಾಗಿರುವುದರಿಂದ ಮಾ. 23 ರಂದು ಟಿ. ನರಸೀಪುರ ಪಟ್ಟಣದಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಸಮಿತಿ ನಿರ್ಧರಿಸಿದ್ದು, ಅಂದು ಬೆಳಗ್ಗೆ 6ಕ್ಕೆ ತಾಲೂಕು ಕಚೇರಿ ಮುಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ.ತಾಲೂಕಿನ ಪ್ರತಿ ಗ್ರಾಮದಿಂದಲೂ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.ಸಮಾಜದ ಯುವಮುಖಂಡ ಶಿವಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪ್ರಭುಸ್ವಾಮಿ ಮಾತನಾಡಿದರು. ಅಂಬೇಡ್ಕರ್ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಎಂ ಕೆ ಸಿದ್ದರಾಜು, ಪಿ ಕಾರ್ಡ್ ಬ್ಯಾಂಕ್ ನಿರ್ದೇಶಕ ಎನ್. ಲಿಂಗಪ್ಪಾಜಿ, ದಸಂಸ ಜಿಲ್ಲಾ ಸಂಚಾಲಕ ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಮಹೇಶ್, ಪಿಎಸಿಸಿಎಸ್ ನಿರ್ದೇಶಕ ಸುಂದರ್, ತಾಪಂ ಮಾಜಿ ಸದಸ್ಯ ಬಸವರಾಜು, ಉಮಾಪತಿ, ನಿವೃತ್ತ ಶಿಕ್ಷಕ ವೆಂಕಟರಮಣ, ನಾಗರಾಜು, ಕೆಂಚಪ್ಪ, ಗಣೇಶ್, ನಿರಂಜನ್, ಶಿವು, ಪ್ರೇಮ್ ಕುಮಾರ್ ಇದ್ದರು.