ಕಬ್ಬು ಸರಬರಾಜು ಮಾಡಿರುವ ರೈತರಿಗೆ ಬಾಕಿ ಪ್ರೋತ್ಸಾಹ ಧನ ನೀಡುವಂತೆ ಆಗ್ರಹ

KannadaprabhaNewsNetwork |  
Published : Jun 16, 2026, 01:45 AM IST
15ಕೆಎಂಎನ್ ಡಿ16 | Kannada Prabha

ಸಾರಾಂಶ

ಪಿಎಸ್‌ಎಸ್‌ಕೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಎಂಆರ್‌ಎನ್ ಷುಗರ್ಸ್ ಆಡಳಿತ ಮಂಡಳಿ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಸರ್ಕಾರ ಆದೇಶದಂತೆ ರೈತರ ಖಾತೆಗೆ ಪ್ರೋತ್ಸಾಹ ಧನ ನೀಡದಿದ್ದರೆ ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ನಡೆಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲೂಕು ರೈತಸಂಘ ಕಾರ್ಯಕರ್ತರು ಎಚ್ಚರಿಕೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಿಎಸ್‌ಎಸ್‌ಕೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಎಂಆರ್‌ಎನ್ ಷುಗರ್ಸ್ ಆಡಳಿತ ಮಂಡಳಿ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಸರ್ಕಾರ ಆದೇಶದಂತೆ ರೈತರ ಖಾತೆಗೆ ಪ್ರೋತ್ಸಾಹ ಧನ ನೀಡದಿದ್ದರೆ ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ನಡೆಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲೂಕು ರೈತಸಂಘ ಕಾರ್ಯಕರ್ತರು ಎಚ್ಚರಿಸಿದರು.ಪಟ್ಟಣದ ಪಿಎಸ್‌ಎಸ್‌ಕೆ ಕಾರ್ಖಾನೆ ಎದುರು ಸೇರಿದ ಎರಡು ತಾಲೂಕುಗಳ ರೈತಸಂಘ ಕಾರ್ಯಕರ್ತರು, ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಮುರುಗೇಶ್‌ ಆರ್.ನಿರಾಣಿ ಒಡೆತನದ ಎಂಆರ್‌ಎನ್ ಷುಗರ್ಸ್ ಸರ್ಕಾರದ ಆದೇಶದಂತೆ ರೈತರು ಸರಬರಾಜು ಮಾಡಿರುವ ಪ್ರತಿಟನ್ ಕಬ್ಬಿಗೆ 50 ರು. ಬೆಂಬಲ ಬೆಲೆ ನೀಡಬೇಕು. ಆದರೆ, ಕಾರ್ಖಾನೆ ಮಾಲೀಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂಆರ್‌ಎನ್ ಸಂಸ್ಥೆ ಕಳೆದ ಆರು ವರ್ಷಗಳಿಂದ ಪಾಂಡವಪುರ ಮತು ಶ್ರೀರಂಗಪಟ್ಟಣ ವ್ಯಾಪ್ತಿಯ ಕಬ್ಬುಅರೆಯುವಿಕೆ ಕೆಲಸ ಮಾಡುತ್ತಿದೆ. ರೈತಸಂಘ ಇಷ್ಟು ವರ್ಷಗಳ ಕಾಲ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಂಘರ್ಷಕ್ಕೆ ಇಳಿದಿಲ್ಲ. ಆದರೆ, ಕಾರ್ಖಾನೆ ಮಾಲೀಕರು ಸರ್ಕಾರ ಘೋಷಣೆಯಂತೆ ರೈತರಿಗೆ ಸಲ್ಲಬೇಕಾದ ಹಣ ಪಾವತಿಸುವಲ್ಲಿ ವಿಫಲರಾಗಿದ್ದಾರೆ. ರೈತರು 50 ರು.ಗಳಿಗಾಗಿ ಕಾರ್ಖಾನೆ ಮಾಲೀಕರ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಕಿಡಿಕಾರಿದರು.

ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕಾರ್ಖಾನೆ ನಡೆಸುತ್ತಿರುವ ಎಂಆರ್‌ಎನ್ ಸಂಸ್ಥೆಯವರು ಕೋಟ್ಯಂತರ ಆಸ್ತಿ ಮಾಲೀಕರಾಗಿದ್ದಾರೆ. ಆದರೆ, ರೈತರಿಗೆ ಕೇವಲ 50 ರು.ಪ್ರೋತ್ಸಾಹಧನ ಪಾವತಿಸುವ ಉದ್ಧಾರ ಮನಸ್ಸು ತೋರದೆ ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇದು ನಾಚಿಕೆಗೇಡಿನ ವಿಚಾರ ಎಂದರು.

ರೈತರು ಕಬ್ಬು ಬೆಳೆಯದಿದ್ದರೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಆದಾಯ ಎಲ್ಲಿಂದ ಬರುತ್ತದೆ. ಚಿಲ್ಲರೆ ಹಣಕ್ಕೆ ತಡೆಯಾಜ್ಞೆ ತರುವ ಪರಿಸ್ಥಿತಿಗೆ ಕಾರ್ಖಾನೆ ಮಾಲೀಕರು ಹೋಗಿದ್ದಾರೆ. ನ್ಯಾಯಾಲಯಗಳು ಕೂಡ ರೈತರ ವಿರುದ್ಧದ ಪ್ರಕರಣಗಳಲ್ಲಿ ಆಲೋಚಿಸಿ ತೀರ್ಪು ನೀಡಬೇಕು ಎಂದು ಆಗ್ರಹಿಸಿದರು.

ರೈತರು ಶ್ರಮಪಟ್ಟು ವ್ಯವಸಾಯ ಮಾಡಿ ಕಾರ್ಖಾನೆ ಸರಬರಾಜು ಮಾಡಿದ ಕಬ್ಬಿಗೆ ಸರ್ಕಾರದ ಆದೇಶದಂತೆ ಕಾರ್ಖಾನೆ ಮಾಲೀಕರು ಹಣ ಬಿಡುಗಡೆ ಮಾಡಬೇಕು. ದೇಶಕ್ಕೆ ಅನ್ನ ಹಾಕುವ ರೈತರ ವಿರುದ್ಧ ಈ ರೀತಿಯಾರೂ ನಡೆದುಕೊಳ್ಳಬಾರದು ಎಂದು ಒತ್ತಾಯಿಸಿದರು.

ಉಸ್ತುವಾರಿ ಕಮಿಟಿ ರಚಿಸಿ:

ಪಿಎಸ್‌ಎಸ್‌ಕೆ ಕಾರ್ಖಾನೆಗೆ ಸೇರಿದ ಸುಮಾರು 500 ಕೋಟಿಗೂ ಹೆಚ್ಚಿನ ಆಸ್ತಿ ಇದೆ. ಈ ಆಸ್ತಿ ರಕ್ಷಣೆ ಮಾಡಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ಎಲ್ಲಾ ಪಕ್ಷದ ರೈತರನ್ನು ಒಳಗೊಂಡಂತೆ ಸರ್ಕಾರ ಮೇಲುಸ್ತುವಾರಿ ಕಮಿಟಿ ರಚನೆ ಮಾಡಬೇಕು. ಇದಕ್ಕಾಗಿ ಮೇಲುಕೋಟೆ ಮತ್ತು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಹಾಗೂ ರಮೇಶ್ ಬಂಡಿ ಸಿದ್ದೇಗೌಡ ಪ್ರಯತ್ನ ಪಡಬೇಕು. ಇಬ್ಬರು ಶಾಸಕರಿಗೆ ಈ ಬಗ್ಗೆ ಕನಿಷ್ಠ ಜ್ಞಾನ ಇರಬೇಕು. ಸರ್ಕಾರ ರಚನೆಯಾಗಿ ಮೂರು ವರ್ಷವಾದರೂ ಕಮಿಟಿ ರಚನೆ ಮಾಡಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಮಾಜಿ ಅಧ್ಯಕ್ಷರಾದ ಕೆನ್ನಾಳು ನಾಗರಾಜು, ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಗೌಡೇಗೌಡ, ಎಸ್.ದಯಾನಂದ್, ಎಣ್ಣೆಹೊಳೆಕೊಪ್ಪಲು ವೈ.ಜಿ.ರಘು, ಮಹದೇವು, ಮುರುಳೀಧರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಬರಗಾಲ ಎದುರಿಸಲು ಸಜ್ಜಾಗಿ: ಸಿಎಂ
ರೈಲ್ವೆ ಬಡ್ತಿ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್‌