ಅಮೃತ್ ನಗರೋತ್ಥಾನ ಕಾಮಗಾರಿಯ ಹಣ ಪಾವತಿ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Nov 04, 2025, 01:02 AM IST
ಫೋಟೋ: ೩೧ಪಿಟಿಆರ್-ನಗರಸಭೆನಗರಸಭಾ ಸಾಮಾನ್ಯ ಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ಪುತ್ತೂರು ನಗರಸಭಾ ಸಾಮಾನ್ಯ ಸಭೆಯು ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು: ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಹಂತ ೪ ರ ಸಹಾಯಧನ ಯೋಜನೆ ನಂಬಿಕೊಂಡು ಫಲಾನುಭವಿಗಳು ಮನೆ ದುರಸ್ತಿ, ಹೊಸ ಮನೆ, ಶೌಚಾಯಲ ಸಹಿತ ಹಲವಾರು ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಂಡಿದ್ದು, ಈ ತನಕ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಕಾಮಗಾರಿ ನಡೆಸಿದ ನಗರಸಭಾ ವ್ಯಾಪ್ತಿಯ ೬೬ ಫಲಾನುಭವಿಗಳಿಗೆ ರು. ೪೩.೮೮ ಲಕ್ಷ ರೂ. ಬಾಕಿ ಇದ್ದು ಸಾಲ ಮಾಡಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣವೇ ಈ ಹಣದ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ನಗರಸಭಾ ಸದಸ್ಯರು ಆಗ್ರಹಿಸಿದ್ದಾರೆ.ಪುತ್ತೂರು ನಗರಸಭಾ ಸಾಮಾನ್ಯ ಸಭೆಯು ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆಯಿತು.

ವಿಷಯ ಪ್ರಸ್ತಾಪಿಸಿದ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ನಗರೋತ್ಥಾನದ ಸಹಾಯಧನ ನಂಬಿ ಸಾಲ ಮಾಡಿ ಮನೆ ದುರಸ್ತಿ ಸಹಿತ ಇನ್ನಿತ್ತರ ಕೆಲಸ ಮಾಡಿಸಿದ್ದಾರೆ. ಹಣ ಬಾರದಿರುವ ಬಗ್ಗೆ ಫಲಾನುಭವಿಗಳು ನಗರಸಭೆ ಸದಸ್ಯರಿಗೆ ಕರೆ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಕೆಲವೆಡೆ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ವಸ್ತು ರೂಪದಲ್ಲಿ ಸಾಲ ಕೊಟ್ಟ ಸಂಸ್ಥೆಗಳು ಕೂಡ ಹಣ ಬಿಡುಗಡೆ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಇಲ್ಲಿ ನಗರಸಭೆ ಹಣ ಬಿಡುಗಡೆ ಮಾಡುವ ಅಧಿಕಾರ ಹೊಂದಿಲ್ಲ. ಈ ಹಣ ಸರಕಾರವು ಜಿಲ್ಲಾಡಳಿತದ ಮೂಲಕ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿದೆ ಸರಕಾರ ಅದನ್ನು ಮಾಡಿಲ್ಲ ಎಂದರು.

ಈಗಾಗಲೇ ಶಾಸಕರ, ಸಚಿವರ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದೇವೆ. ಅದಾಗ್ಯೂ ಹಣ ಬಿಡುಗಡೆ ಆಗಿಲ್ಲ. ಈ ಸಮಸ್ಯೆಯ ಗಂಭೀರತೆ ಸರ್ಕಾರದ ಗಮನಕ್ಕೆ ತರುವಂತೆ ಸದಸ್ಯರು ಆಗ್ರಹಿಸಿದರು.೨೦೨೨-೨೩ ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಹಂತ ೪ ಕ್ರಿಯಾಯೋಜನೆಯಂತೆ ರು. ೩.೩೧ ಕೋಟಿ ಕಾದಿರಿಸಲಾಗಿತ್ತು. ೪೧೭ ಫಲಾನುಭವಿಗಳ ಪೈಕಿ ೩೪೨ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ ಕೆಲಸ ನಿರ್ವಹಿಸಿದ ೧೬೦ ಫಲಾನುಭವಿಗಳಿಗೆ ಎರಡು ಹಂತದಲ್ಲಿ ರು. ೭೨. ೩೫ ಲಕ್ಷ ಬಿಡುಗಡೆಯಾಗಿದೆ. ೬೬ ಫಲಾನುಭವಿಗಳಿಗೆ ರು. ೪೩.೮೮ ಲಕ್ಷ ಬಿಡುಗಡೆಗೆ ಬಾಕಿ ಇದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿರುವ ಬಗ್ಗೆ ಸದಸ್ಯರು ಕಳವಳ ವ್ಯಕ್ತಪಡಿಸಿದರು. ಹಂತ ಹಂತವಾಗಿ ಬೀದಿನಾಯಿಗಳ ಸಂತಾನ ಹರಣ ಪ್ರಕ್ರಿಯೆ ನಡೆಸಲಾಗುತ್ತಿದೆ. ಆರು ಬಾರಿ ಟೆಂಡರ್ ಆಗಿದೆ ಎಂದು ಉಪಾಧ್ಯಕ್ಷರು ಉತ್ತರಿಸಿದ್ದರು. ನಗರೋತ್ಥಾನ ಯೋಜನೆಯ ಕಾಮಗಾರಿ ನನ್ನ ವಾರ್ಡ್ನಲ್ಲಿ ನಿರ್ವಹಿಸುವಾಗಲೂ ನನ್ನ ಗಮನಕ್ಕೆ ತಂದಿಲ್ಲ ಎಂದು ಸದಸ್ಯೆ ಶಶಿಕಲಾ ಆರೋಪಿಸಿದರು. ಇನ್ನು ಮುಂದೆ ಹೀಗಾದಂತೆ ನೋಡಿಕೊಳ್ಳುವ ಭರವಸೆ ನೀಡಲಾಯಿತು.

ಪೌರಾಯುಕ್ತೆ ವಿದ್ಯಾ ಎಂ.ಕಾಳೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ವೇದಿಕೆಯಲ್ಲಿದ್ದರು. ಸದಸ್ಯರಾದ ಭಾಮಿ ಅಶೋಕ್ ಶೆಣೈ, ದೀಕ್ಷಾ ಪೈ, ಶೈಲಾ ಪೈ, ರಿಯಾಜ್ ಪರ್ಲಡ್ಕ, ಪ್ರೇಮಲತಾ ನಂದಿಲ, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ ಗೌಡ, ಯಶೋಧಾ ಪೂಜಾರಿ, ಶಾರದಾ ಅರಸ್, ಶಶಿಕಲಾ, ಸಂತೋಷ್ ಕುಮಾರ್, ಪದ್ಮನಾಭ ನಾಯ್ಕ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ