ಹಗರಿಬೊಮ್ಮನಹಳ್ಳಿ: ಕೇಂದ್ರ ಸರ್ಕಾರದ ಎಂಟನೆಯ ವೇತನ ಆಯೋಗದ ಶಿಫಾರಸ್ಸುಗಳ ಆಧಾರದಲ್ಲಿ ರಾಜ್ಯ ಸರ್ಕಾರ ಪಿಂಚಣಿ ಪರಿಷ್ಕರಿಸಬೇಕು, ಜತೆಗೆ ಪಿಂಚಣಿ ಪರಿಷ್ಕರಣೆ ಆಗುವವರೆಗೂ ಪಿಂಚಣಿದಾರರಿಗೆ ಮಧ್ಯಂತರ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಈ. ಕೃಷ್ಣ ಮೂರ್ತಿ ಒತ್ತಾಯಿಸಿದರು.
ತುಟ್ಟಿಭತ್ಯೆ ಹೆಚ್ಚಳ ಮಾಡಿ ಮೂಲ ಪಿಂಚಣಿ ಜತೆಗೆ ವಿಲೀನ ಮಾಡಬೇಕು. ಪರಿವರ್ತಿತ ಪಿಂಚಣಿ ಮೊತ್ತದ ವಸೂಲಾತಿ ಆವಧಿ ಮರುಪರಿಶೀಲನೆ ಮಾಡಬೇಕು. ಕುಟುಂಬ ಪಿಂಚಣಿದಾರರಿಗೂ ಪಿಂಚಣಿದಾರರಂತೆಯೇ ಸಮಾನ ಸೌಲಭ್ಯ ವಿಸ್ತರಿಸಬೇಕು. ಓಪಿಎಸ್ ಮರುಜಾರಿಯ ಜತೆಗೆ ತಡೆ ಹಿಡಿಯಲಾಗಿರುವ ೧೮ ತಿಂಗಳ ತುಟ್ಟಿ ಭತ್ಯೆ ವಿತರಿಸುವ ಮೂಲಕ ಪಿಂಚಣಿದಾರರ ನಿವೃತ್ತ ಬದುಕಿಗೆ ಭದ್ರತೆ ಕಲ್ಪಿಸಲು ಆಗ್ರಹಿಸಿದರು.
ಹಿರಿಯ ನಾಗರಿಕರಿಗೆ ರೈಲು ಮತ್ತು ವಿಮಾನಗಳ ಪ್ರಯಾಣ ದರದಲ್ಲಿ ರಿಯಾಯಿತಿ ಒದಗಿಸುವ ಜತೆಗೆ ಪಿಂಚಣಿದಾರರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಬೇಕು. ಪಿಂಚಣಿದಾರರ ವೈದ್ಯಕೀಯ ಭತ್ಯೆಯಲ್ಲಿ ಹೆಚ್ಚಳ ಜತೆಗೆ ಕೇರಳ ಮಾದರಿಯಲ್ಲಿ ಪಿಂಚಣಿದಾರರ ಮಂಡಳಿ ರಚಿಸಿ ಪಿಂಚಣಿದಾರರ ಸಮಸ್ಯೆಗಳ ಪರಿಹಾರಕ್ಕೆ ಉನ್ನತ ಮಟ್ಟದ ಸಭೆ ನಡೆಸಿ ಚರ್ಚಿಸಬೇಕು ಎಂದು ಕೋರಿದರು.ಒಕ್ಕೂಟದ ಪ್ರಭಾಕರ್ ಕಲಾಲ್, ಭೀಮಸೇನಪ್ಪ, ಪಿ. ತುಕಾರಾಮ್ ನಾಯ್ಕ, ಎನ್. ರಾಮಪ್ಪ, ಕುಮಾರಸ್ವಾಮಿ, ಶ್ರೀಶೈಲಸ್ವಾಮಿ, ಸುಭಾನ್ ಆಲಿ, ಎ.ವೀರಣ್ಣ, ಶಿವಪುತ್ರಪ್ಪ ಹಾಗೂ ರಂಗನಾಥ್ ಹವಾಲ್ದಾರ್ ಮನವಿ ಸಲ್ಲಿಸುವ ನಿಯೋಗದಲ್ಲಿದ್ದರು.