ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಪೌರಕಾರ್ಮಿಕರು, ದಿನಗೂಲಿ ನೌಕರರು, ಗ್ರಾಪಂ ನೌಕರರಂತೆ ನಮ್ಮ ಸೇವೆಯನ್ನೂ ಕಾಯಂ ಮಾಡಿ ಪುಣ್ಯ ಕಟ್ಕೊಳ್ಳಿ!
ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಇದು.ಕಳೆದ ಹತ್ತು ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಇದೀಗ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆಯೂ ಅಲ್ಲೂ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ಅಧಿವೇಶನದಲ್ಲಿ ತಮ್ಮ ಪರವಾಗಿ ಸರ್ಕಾರ ಗಟ್ಟಿನಿರ್ಧಾರ ಕೈಗೊಳ್ಳಲೇಬೇಕು. ಲಿಖಿತ ಆದೇಶವಾಗುವವರೆಗೂ ಹೋರಾಟ ನಿಲ್ಲದು ಎಂಬ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವುದಾಗಿ ಭರವಸೆ ನೀಡಿದೆ. ನುಡಿದಂತೆ ನಡೆಯುವ ಸರ್ಕಾರ ಎನ್ನುವುದನ್ನು ಸಾಬೀತುಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಸಮಸ್ಯೆ ಏನು?ರಾಜ್ಯದಲ್ಲಿ ಬರೋಬ್ಬರಿ 11500 ಅತಿಥಿ ಉಪನ್ಯಾಸಕರಿದ್ದಾರೆ. ಹಾಗೆ ನೋಡಿದರೆ ಕಳೆದ ವರ್ಷ ಇವರ ಸಂಖ್ಯೆ 14500 ಇತ್ತು. ಜತೆಗೆ 40 ಅಥವಾ 60 ವಿದ್ಯಾರ್ಥಿಗಳಿಗೆ ಒಬ್ಬರಂತೆ ಅತಿಥಿ ಉಪನ್ಯಾಸಕರು ಇರುತ್ತಿದ್ದರು. ಆದರೆ, ಈ ವರ್ಷ 120 ವಿದ್ಯಾರ್ಥಿಗಳಿದ್ದರೂ ಒಬ್ಬೊಬ್ಬ ಉಪನ್ಯಾಸಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಅತಿಥಿ ಉಪನ್ಯಾಸಕರ ಸಂಖ್ಯೆ ಕಡಿಮೆಯಾಗಿದೆ. ಎಲ್ಲ ಕಾಲೇಜುಗಳು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾದರೂ ಇವರನ್ನು ಸರ್ಕಾರ ಈ ವರ್ಷ ಕೆಲಸಕ್ಕೆ ತೆಗೆದುಕೊಂಡಿರುವುದು ಅಕ್ಟೋಬರ್‌ನಿಂದ. ಪ್ರತಿ ವರ್ಷ ಏಳೆಂಟು ತಿಂಗಳು ಮಾತ್ರ ಇವರಿಗೆ ಕೆಲಸ. ಅಬ್ಬಬ್ಬಾ ಎಂದರೆ 10 ತಿಂಗಳು ಮಾತ್ರ..
ಪ್ರತಿವಾರಕ್ಕೆ 15 ಗಂಟೆ ಇವರ ಕೆಲಸ. ಹೊಸಬರಿಗೆ ₹26 ಸಾವಿರ, ಯುಜಿಸಿ ವಿದ್ಯಾರ್ಹತೆ ಇಲ್ಲದ 5 ವರ್ಷಕ್ಕಿಂತ ಹೆಚ್ಚು ಸರ್ವಿಸ್ ಆದವರಿಗೆ ₹28 ಸಾವಿರ, ಯುಜಿಸಿ ವಿದ್ಯಾರ್ಹತೆ (ಸೆಟ್, ನೆಟ್, ಪಿಎಚ್‌ಡಿ) ಹೊಂದಿದ 5 ವರ್ಷಕ್ಕಿಂತ ಕಡಿಮೆ ಅನುಭವಹೊಂದಿದ್ದರೂ ₹30 ಸಾವಿರ, ಯುಜಿಸಿ ವಿದ್ಯಾರ್ಹತೆ ಹೊಂದಿ 5 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿದ್ದರೆ ₹32 ಸಾವಿರ ಸಂಬಳ ಕೊಡಲಾಗುತ್ತಿದೆ.ಏನಿವರ ಬೇಡಿಕೆ?
ಪ್ರತಿವರ್ಷ ಹುದ್ದೆಗಳನ್ನು ಆಹ್ವಾನ ಮಾಡಿ ಹೊಸದಾಗಿಯೇ ನೇಮಕ ಮಾಡಿಕೊಳ್ಳಲಾಗುತ್ತದೆ. ಅದರ ಬದಲು ತಮ್ಮನ್ನು ಕಾಯಂ ಮಾಡಿಕೊಳ್ಳಿ ಎನ್ನುವುದು ಇವರ ಬೇಡಿಕೆ.ದೆಹಲಿ, ಹರಿಯಾಣದಲ್ಲಿ ಈ ರೀತಿ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿಕೊಳ್ಳಲಾಗಿದೆ. ಅದೇ ಮಾದರಿ ಅನುಸರಿಸಿ ಎಂಬ ಕೂಗು ಇವರದು. ಇನ್ನು ನಮ್ಮ ರಾಜ್ಯದಲ್ಲಿ ಪೌರಕಾರ್ಮಿಕರು, ವಿವಿಧ ಇಲಾಖೆಗಳಲ್ಲಿನ ದಿನಗೂಲಿ ನೌಕರರನ್ನು, ವೈದ್ಯರು, ಅರೇವೈದ್ಯಕೀಯ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಆಧಾರದ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅದೇ ರೀತಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ನಮ್ಮನ್ನು ಕಾಯಮಾತಿ ಮಾಡಿಕೊಳ್ಳಿ ಎನ್ನುತ್ತಿದ್ದಾರೆ.
ಹಲವು ವರ್ಷಗಳ ಬೇಡಿಕೆ ನಮ್ಮದು. ಬೇರೆ ಬೇರೆ ಇಲಾಖೆಗಳಲ್ಲಿ ನೇಮಕ ಮಾಡಿಕೊಂಡಂತೆ ನಮ್ಮನ್ನು ಕಾಯಂ ಮಾಡಿಕೊಳ್ಳಲಿ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮಾತ್ರ ನಿಲ್ಲದು ಎಂದು ಅತಿಥಿ ಉಪನ್ಯಾಸಕ ಸಂಘದ ಮುಖಂಡ ಡಾ. ಯಶೋಧರ ಜಿ.ಎನ್ ತಿಳಿಸಿದ್ದಾರೆ.