ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸುವಂತೆ ಆಗ್ರಹ

KannadaprabhaNewsNetwork |  
Published : Aug 26, 2026, 02:45 AM IST
ಪೋಟೊ23ಕೆಎಸಟಿ2:ಕುಷ್ಟಗಿ ಪಟ್ಟಣದ ಮೂಲಭೂತ ಸೌಕರ್ಯಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನಗರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಪಟ್ಟಣದ ಹಲವು ಬಡಾವಣೆಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ

ಕುಷ್ಟಗಿ: ಕುಡಿಯುವ ನೀರಿನ ಸಮಸ್ಯೆ, ಸಂಚಾರ ದಟ್ಟಣೆ, ಸಾರ್ವಜನಿಕ ಜಾಗ ಹಾಗೂ ಉದ್ಯಾನವನ ಅತಿಕ್ರಮಣ, ಬೀದಿ ವ್ಯಾಪಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕುಷ್ಟಗಿ ನಗರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿಗೆ ಮನವಿ ಸಲ್ಲಿಸಿದರು.

ಪಟ್ಟಣ ಬೆಳೆಯುತ್ತಿದ್ದು, ಬಡಾವಣೆಗಳು ವಿಸ್ತರಿಸುತ್ತಿವೆ. ಆದರೆ ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಮುಖಂಡ ಕೇದಾರನಾಥ ತುರಕಾಣಿ ಮಾತನಾಡಿ, ಪಟ್ಟಣದ ಹಲವು ಬಡಾವಣೆಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಶುದ್ಧ ನೀರಿಗಾಗಿ ಜನರು ಖಾಸಗಿ ನೀರಿನ ಕ್ಯಾನ್‌ ಅವಲಂಬಿಸುವಂತಾಗಿದೆ. ಸ್ಥಗಿತಗೊಂಡಿರುವ ನೀರು ಶುದ್ಧೀಕರಣ ಘಟಕ ದುರಸ್ತಿಪಡಿಸಿ ಸಮರ್ಪಕ ನೀರು ಪೂರೈಸಬೇಕು. ಪಟ್ಟಣದಲ್ಲಿ ಅತಿಕ್ರಮಣವಾಗಿರುವ ಪ್ರದೇಶ ತೆರವುಗೊಳಿಸಬೇಕು. ಪ್ರಮುಖ ರಸ್ತೆಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ಪಾರ್ಕಿಂಗ್, ಪಾದಚಾರಿ ಮಾರ್ಗ ಹಾಗೂ ಅಗತ್ಯ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರಸ್ತೆ ಬದಿಯ ಮಾಂಸದ ವ್ಯಾಪಾರ ಸೇರಿದಂತೆ ಬೀದಿ ವ್ಯಾಪಾರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳ ಗುರುತಿಸಿ ವ್ಯವಸ್ಥಿತ ಮಾರುಕಟ್ಟೆ ನಿರ್ಮಿಸಬೇಕು. ಈ ಹಿಂದೆ ಹಲವು ಬಾರಿ ಸಮಸ್ಯೆ ಕುರಿತು ಪುರಸಭೆಗೆ ಮನವಿ ಸಲ್ಲಿಸಿದ್ದರೂ ನಿರೀಕ್ಷಿತ ಪರಿಹಾರ ದೊರೆತಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮನವಿಗಳ ಬಗ್ಗೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವೇದಿಕೆ ಉಪಾಧ್ಯಕ್ಷ ಪರಸಪ್ಪ ಅಮರಾವತಿ ಮನವಿ ಪತ್ರ ಓದಿ ಮಾತನಾಡಿ, ಪಟ್ಟಣದ ಅಭಿವೃದ್ಧಿಯೊಂದಿಗೆ ನಾಗರಿಕರ ಮೂಲಭೂತ ಅಗತ್ಯಗಳಿಗೂ ಆದ್ಯತೆ ನೀಡಬೇಕು. ಸಾರ್ವಜನಿಕ ಸಮಸ್ಯೆ ನಿರ್ಲಕ್ಷಿಸದೆ ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಮನವಿ ಸ್ವೀಕರಿಸಿದರು. ವೇದಿಕೆ ಅಧ್ಯಕ್ಷ ದೇವೇಂದ್ರಪ್ಪ ಕಟ್ಟಿಮನಿ, ನಾಗಪ್ಪ ಹೊಸವಕ್ಕಲ, ಅಡಿವೆಪ್ಪ ನೆರೆಬೆಂಚಿ, ದುರಗಪ್ಪ, ಶಿವಶಂಕರಪ್ಪ ಕುರಿ, ಸೈಯದ್ ಮುರ್ತುಜಾ, ಮಹೇಶ್ವರಯ್ಯ ಹಿರೇಮಠ, ಶಿವಾಜಿ ಹಡಪದ, ಪಾಂಡುರಂಗ ಸುರ್ವೆ, ಜೆ.ಜೆ. ಆಚಾರ್‌, ಮಹಾಂತೇಶ ಮಂಗಳೂರು, ಸಿದ್ದಪ್ಪ ಚಲವಾದಿ, ಶಂಕರಪ್ಪ ಕವಡಿಕಾಯಿ, ಕೃಷ್ಣಪ್ಪ ಪತ್ತಾರ, ಹನಮಂತಪ್ಪ ಬಸಾಪುರ, ಚಂದ್ರಪ್ಪ ರಾಣಿ, ಗೋವಿಂದರಾಜ ಜೀನಗಾರ, ಯಾಖುಬಖಾನ ಸೌದಾಗರ, ಹನುಮಪ್ಪ ಮಾದರ, ಎಂ.ಡಿ. ಶೌಕತ್ ಹುಸೇನ, ಹುಲಿಗೇಶ ಮುದಗಲ್ ಹಾಗೂ ಶರಣಪ್ಪ ಶಾಖಾಪುರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲು ಅರಣ್ಯದಲ್ಲಿ ಕಳ್ಳ ಬೇಟೆ ಯತ್ನ: ಮೂವರು ವಶಕ್ಕೆ
ಕೊಡಗಿನಲ್ಲಿ ಮುಸಲಧಾರೆ: ತ್ರಿವೇಣಿ ಸಂಗಮ ಮುಳುಗಡೆ