ಶೈಕ್ಷಣಿಕ ಪ್ರಗತಿಗೆ ಶಿರಸಂಗಿ ಲಿಂಗರಾಜರ ದೂರದೃಷ್ಟಿಯೇ ಪ್ರೇರಣೆ: ಅಭಿನವ ಬೂದಿಶ್ವರ ಸ್ವಾಮಿಗಳು

KannadaprabhaNewsNetwork |  
Published : Aug 26, 2026, 02:45 AM IST
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಸ್ತ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಲಿಂಗರಾಜ ದೇಸಾಯಿ ನೀಡಿದ ಕೊಡುಗೆ ಅಪಾರ. ಶಿಕ್ಷಣ, ಸಮಾಜಸೇವೆ ಹಾಗೂ ರೈತರ ಹಿತಕ್ಕಾಗಿ ಅವರು ಕೈಗೊಂಡ ಕಾರ್ಯಗಳು ಅವರ ಮಹಾನ್ ತ್ಯಾಗ ಮತ್ತು ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿವೆ.

ಗದಗ: ಲಿಂಗಾಯತ ಸಮಾಜದ ಶೈಕ್ಷಣಿಕ ಪ್ರಗತಿಗೆ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಅವರ ದೂರದೃಷ್ಟಿ, ತ್ಯಾಗ ಹಾಗೂ ಸೇವಾ ಮನೋಭಾವವೇ ಪ್ರಮುಖ ಪ್ರೇರಣೆಯಾಗಿದೆ ಎಂದು ಹೊಸಳ್ಳಿಯ ಅಭಿನವ ಬೂದಿಶ್ವರ ಸ್ವಾಮಿಗಳು ಹೇಳಿದರು.

ನಗರದ ಕುಡುವಕ್ಕಲಿಗರ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ 14ನೇ ವಾರ್ಷಿಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿರಸಂಗಿ ಲಿಂಗರಾಜರು ಸಮಾಜದ ಭವಿಷ್ಯವನ್ನು ದೂರದೃಷ್ಟಿಯಿಂದ ಕಂಡು ಶಿಕ್ಷಣಕ್ಕೆ ನೀಡಿದ ಮಹತ್ವದ ಫಲವಾಗಿ ಇಂದು ಲಿಂಗಾಯತ ಸಮಾಜದವರು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಸಮಸ್ತ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಲಿಂಗರಾಜ ದೇಸಾಯಿ ನೀಡಿದ ಕೊಡುಗೆ ಅಪಾರ. ಶಿಕ್ಷಣ, ಸಮಾಜಸೇವೆ ಹಾಗೂ ರೈತರ ಹಿತಕ್ಕಾಗಿ ಅವರು ಕೈಗೊಂಡ ಕಾರ್ಯಗಳು ಅವರ ಮಹಾನ್ ತ್ಯಾಗ ಮತ್ತು ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿವೆ ಎಂದರು.

ಸಂಘದ ಕೋಶಾಧ್ಯಕ್ಷ ಎ.ಎಸ್. ಪಾಟೀಲ ಮಾತನಾಡಿ, ಲಿಂಗರಾಜ ದೇಸಾಯಿ ಅವರು ಕಾಶಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸುವಲ್ಲಿ ವಹಿಸಿದ ಪಾತ್ರ ಹಾಗೂ ಬರಗಾಲದ ಸಂದರ್ಭದಲ್ಲಿ ಕೆರೆ- ಕಟ್ಟೆಗಳನ್ನು ನಿರ್ಮಿಸಿ ರೈತರಿಗೆ ನೆರವಾದ ಸೇವೆಯನ್ನು ವಿವರಿಸಿದರು.

ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರು, ಇಬ್ಬರು ಮಾಜಿ ಸೈನಿಕರು, ಶ್ರೇಷ್ಠ ರೈತರು, ಗೌರವ ಡಾಕ್ಟರೇಟ್ ಪದವಿ ಪಡೆದ ಹಾಗೂ ಪರ್ವತಾರೋಹಿಯನ್ನು ಸನ್ಮಾನಿಸಲಾಯಿತು.

ಕುಡುವಕ್ಕಲಿಗರ ಭವನದ ನಿರ್ಮಾಣಕ್ಕೆ ನೆರವಾಗುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಬಂಪರ್ ಲಾಟರಿ ಯೋಜನೆಯ ಡ್ರಾ ನೆರವೇರಿತು. ಸಂಘದ ಕಾರ್ಯದರ್ಶಿ ಶರಣಪ್ಪ ದಿಡ್ಡಿಮನಿ ವಾರ್ಷಿಕ ವರದಿ ಹಾಗೂ ಆಯವ್ಯಯ ಪತ್ರಿಕೆ ಮಂಡಿಸಿ, ಸಭೆಯಲ್ಲಿ ಚರ್ಚಿಸಿ ಅನುಮೋದಿಸಲಾಯಿತು.

ಸಮಾಜದ ಹಿರಿಯರಾದ ಕಲ್ಲನಗೌಡ್ರ, ಈರಪ್ಪಣ್ಣ ಬಿಸನಹಳ್ಳಿ, ವಿ.ಜಿ. ಕನಾಜ, ಸಿ.ಎನ್. ಜನಯಿ, ವಿ.ಕೆ. ಬಳಗೇರ ಸೇರಿದಂತೆ ಗಣ್ಯರು ಇದ್ದರು. ಯಲ್ಲಪ್ಪಗೌಡ ಸಂಕನಗೌಡ ಪ್ರಾರ್ಥಿಸಿದರು. ಪ್ರಶಾಂತ ಕನಾಜ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲು ಅರಣ್ಯದಲ್ಲಿ ಕಳ್ಳ ಬೇಟೆ ಯತ್ನ: ಮೂವರು ವಶಕ್ಕೆ
ಕೊಡಗಿನಲ್ಲಿ ಮುಸಲಧಾರೆ: ತ್ರಿವೇಣಿ ಸಂಗಮ ಮುಳುಗಡೆ