ಕನ್ನಡಪ್ರಭ ವಾರ್ತೆ ಮಡಿಕೇರಿ ಪ್ರವಾಸಿತಾಣ ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳಿಗೆ ಒಡ್ಡಿರುವ ನಿರ್ಬಂಧ ತೆರವುಗೊಳಿಸಬೇಕೆಂದು ಮಾಂದಲ್ ಪಟ್ಟಿ ಜೀಪ್ ಮಾಲೀಕರು ಹಾಗೂ ಚಾಲಕರು ಒತ್ತಾಯಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಪ್ರವಾಸಿಗರನ್ನು ಜೀಪ್ ನಲ್ಲಿ ಕರೆದೊಯ್ಯುವ ಮೂಲಕ ಸ್ಥಳೀಯ ಯುವಕರು ಉದ್ಯೋಗವನ್ನು ಕಂಡುಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಬಾಡಿಗೆ ಮಾಡುವ ಸಂದರ್ಭ ಯಾರೂ ಕಾನೂನು ಉಲ್ಲಂಘಿಸಿಲ್ಲ. ಆದರೆ ಅಧಿಕಾರಿಗಳು ಬದಲಾದಂತೆ ಯಾರದ್ದೋ ಒತ್ತಡಕ್ಕೆ ಮಣಿದು ಒಂದೊಂದು ನಿಯಮ ಜಾರಿ ಮಾಡಲಾಗುತ್ತಿದ್ದು, ಇದರಿಂದ ಚಾಲಕರ ಜೀವನ ಸಂಕಷ್ಟಕ್ಕೆ ಸಿಲುಕುತ್ತಿದೆ. ಸಾಲ ಮಾಡಿ ಜೀಪ್ ಖರೀದಿಸಲಾಗಿದೆ, ಇದೀಗ ದಿಢೀರ್ ಆಗಿ ನಿರ್ಬಂಧ ಹೇರಿರುವುದರಿಂದ ಸಾಲ ತೀರಿಸಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇತ್ತೀಚಿನ ಹತ್ತು ವರ್ಷಗಳಲ್ಲಿ ಕೊಡಗಿನಲ್ಲಿ ಹೋಂಸ್ಟೇಗಳು ಹೆಚ್ಚಾದಂತೆ ಮಾಂದಲ್‌ಪಟ್ಟಿಗೆ ತೆರಳುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಯಿತು. ಅದರಂತೆ ಮಾಂದಲ್‌ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳ ಸಂಖ್ಯೆಯು ಬೆಳೆಯಲಾರಂಭಿಸಿತು. ಯಾವಾಗ ಈ ಉದ್ಯೋಗವು ಲಾಭದಾಯಕವಾಗಿ ಕಂಡು ಬರಲು ಆರಂಭಿಸಿತೋ ಅಂದಿನಿಂದ ಕೆಲವರು ವೈಯುಕ್ತಿಕ ಹಿತಾಸಕ್ತಿಗಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ವರ್ಗಾವಣೆಯಾದಂತೆಲ್ಲ ತಮ್ಮದೇ ಆದ ಒಂದು ಕಾನೂನು ರೂಪುಗೊಳ್ಳುತ್ತದೆ. ಅದರಂತೆ ರಾಜಕೀಯ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಬದಲಾದಂತೆ ತಮ್ಮದೇ ಆದ ಕಾನೂನು ರೂಪಿಸುತ್ತಾರೆ. ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿಗಳ ಕಾನೂನೇ ಬೇರೆ. ಈ ಅತಂತ್ರ ವ್ಯವಸ್ಥೆಯ ನಡುವೆ ಬಲಿಪಶುಗಳಾಗುತ್ತಿರುವವರು ಜೀಪ್ ಮಾಲೀಕರು ಹಾಗೂ ಚಾಲಕರು ಎಂದು ಆರೋಪಿಸಿದರು.
ಕುಟುಂಬ ಸಹಿತ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ತೆರಳಿ ಯುವಕರ ಉದ್ಯೋಗದ ದೃಷ್ಟಿಯಿಂದ ನಿಯಮಗಳನ್ನು ಸಡಿಲಿಸಿ ಪ್ರವಾಸಿಗರನ್ನು ಕರೆದೊಯ್ಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗುವುದು. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಎಸ್.ಯು.ತಮ್ಮಯ್ಯ, ಚೆರಿಯಮನೆ ಆನಂದ್, ಟಿ.ಬಿ.ಚೇತನ್, ಎ.ಬಿ.ಲೋಕೇಶ್ ಹಾಗೂ ಶಹಬಾಜ಼್ ಆಲಿ ಎಂ.ಎ. ಇದ್ದರು.