ಸಿರುಗುಪ್ಪ: ತಾಲೂಕಿನ ಕೊನೆಯ ಭಾಗದ ಹಾಗೂ ನೆರೆಯ ಸೀಮಾಂಧ್ರ ಪ್ರದೇಶದ ಗಡಿಯಲ್ಲಿರುವ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿಲ್ಲೆಗೆ ಮಾದರಿಯಾಗಿದೆ. ಈ ಶಾಲೆಗೆ ಎಲ್ಲ ಸೌಲಭ್ಯಗಳಿವೆ. ಆದರೆ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಕಾಡುತ್ತಿದೆ.ಈ ಶಾಲೆ 680ಕ್ಕೂ ಅಧಿಕ ವಿದ್ಯಾರ್ಥಿಗಳ ದಾಖಲಾತಿ ಹೊಂದಿದ್ದು, ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆವರಣದೆಲ್ಲೆಡೆ ವಿವಿಧ ಗಣ್ಯರ ನಾಮಕರಣದೊಂದಿಗೆ ಸುಂದರ ಕಾನನ ನಿರ್ಮಿಸಲಾಗಿದೆ. ತಾಲೂಕಿನಲ್ಲಿ ಅತಿ ಹೆಚ್ಚು ದಾಖಲಾತಿ ಹೊಂದಿರುವ ಶಾಲೆಗಳಲ್ಲಿ ಇದೂ ಒಂದು.ದಾನಿಗಳು, ಜನಪ್ರತಿನಿಧಿಗಳು, ಪೋಷಕರು ಶಾಲೆಯ ಅಭಿವೃದ್ಧಿಗಾಗಿ ಸಹಾಯಹಸ್ತ ಚಾಚುತ್ತಾರೆ. ಶಿಕ್ಷಕರಿಗೆ ಪ್ರೋತ್ಸಾಹ ನೀಡುತ್ತಾರೆ. ಹೀಗಾಗಿ ಉತ್ತಮ ಶೈಕ್ಷಣಿಕ ಗುಣಮಟ್ಟ ಹೊಂದಿದೆ.ಸರ್ಕಾರಿ ಅನುದಾನದ ಜತೆಗೆ ಈ ಭಾಗದ ಅನೇಕ ಶಿಕ್ಷಣಪ್ರೇಮಿಗಳು ಮುಂದೆ ಬಂದು ಹಲವು ಸೌಲಭ್ಯ ಒದಗಿಸಿದ್ದಾರೆ. ಸುತ್ತುಗೋಡೆಗೆ ಆದರ್ಶ ವ್ಯಕ್ತಿಗಳ ಭಾವಚಿತ್ರ ಚಿತ್ರಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳನ್ನು ಒದಗಿಸಿದ್ದಾರೆ. ಶುದ್ಧ ಪರಿಸರಕ್ಕಾಗಿ ಸಸಿ ನೆಡಲಾಗಿದೆ. ಈ ಎಲ್ಲ ಕಾರಣಕ್ಕೆ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.
ಗ್ರಾಮದ ಹಿರಿಯರು ಮತ್ತು ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ. 5 ಕಾಯಂ, 15 ಅತಿಥಿ ಶಿಕ್ಷಕರಿಂದ ಪಾಠ ಬೋಧನೆಯಾಗುತ್ತಿದೆ. ದೈಹಿಕ ಶಿಕ್ಷಣ ಶಿಕ್ಷಕರನ್ನು ಒದಗಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಾದರೂ ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿದರೆ ಮಕ್ಕಳ ಕ್ರೀಡಾಸಕ್ತಿಗೆ ಮತ್ತಷ್ಟು ಪುಷ್ಟಿ ದೊರೆಯುತ್ತದೆಂದು ಪ್ರಭಾರಿ ಮುಖ್ಯಗುರುಗಳಾದ ಕೋಟೇಶ್ ಅಭಿಮತ ವ್ಯಕ್ತಪಡಿಸಿದರು.