ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಸಭೆ ಸೇರಿ, ಅಗತ್ಯ ವಸ್ತುಗಳ ಬೆಲೆ ಏರಿಸಿ ಜನ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೆ ಹಾಲಿನ ಬೆಲೆ ಹೆಚ್ಚಿಸಿ ಜನ ಸಾಮಾನ್ಯರ ಬದುಕಿನ ಮೇಲೆ ಸರ್ಕಾರ ಹೆಚ್ಚು ಹೊರೆ ಮಾಡಿದೆ ಎಂದು ದೂರಿದರು.
ಆಡಳಿತದ ಅನುಕೂಲಕ್ಕಾಗಿ ಬೇಕಾ ಬಿಟ್ಟಿ ಬೆಲೆ ಏರಿಸಿ ಜನರ ಬದುಕಿನ ಜೊತೆ ಆಟವಾಡುವ ಕೆಲಸ ಸರ್ಕಾರ ಮಾಡುತ್ತಿದೆ. ವಿದ್ಯಾರ್ಥಿ, ರೈತ ಕಾರ್ಮಿಕ ಸೇರಿ ಮಧ್ಯಮ ವರ್ಗದ ಬಡಜನರಿಗೆ ಸರ್ಕಾರದ ಈ ನಡೆ ಆಘಾತವನ್ನುಂಟು ಮಾಡಿದೆ ಎಂದರು.ಮುಂಬರುವ ದಿನಗಳಲ್ಲಿ ಬಸ್ ದರ ಹೆಚ್ಚಿಸುವ ಪ್ರಸ್ತಾವನೆಯನ್ನು ಸಾರಿಗೆ ಸಚಿವರು ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ಆರ್ಥಿಕ ಸಂಪನ್ಮೂಲಗಳ ಕ್ರೂಡೀಕರಣಕ್ಕೆ ಸರ್ಕಾರಕ್ಕೆ ಸಾಕಷ್ಟು ದಾರಿಗಳಿವೆ. ಆದರೆ, ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿ ಆ ಹಣದಿಂದಲೇ ಆಡಳಿತ ಯಂತ್ರ ನಡೆಸುತ್ತಿರುವುದು ನಿಜಕ್ಕೂ ನಾಚಿಕೆಗೇಡು. ಬೆಲೆ ಏರಿಕೆ ದುಷ್ಪರಿಣಾಮದ ಮಾಹಿತಿ ಸರ್ಕಾರಕ್ಕೆ ಸ್ಪಷ್ಟವಾಗಿಲ್ಲ. ಈ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿದು ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.