ಕಬ್ಬು ಕಟಾವು ವೆಚ್ಚದ ಮೂಲಕ ಕಾರ್ಖಾನೆಯಿಂದಲೇ ರೈತರ ಶೋಷಣೆಯಾಗುತ್ತಿದೆ. ರೈತರ ಕಬ್ಬಿನ ಹಣ ಬಳ್ಳಾರಿ, ಮಹಾರಾಷ್ಟ್ರದವರ ಪಾಲಾಗುತ್ತಿದೆ. ಜನವರಿ ವೇಳೆಗೆ ಟನ್ ವೊಂದಕ್ಕೆ 1300 ರು., 1400 ರು. ಕಟಾವು ವೆಚ್ಚ ಆಗುತ್ತಿದೆ.
ಮದ್ದೂರು:
ಕಳೆದ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಟನ್ ಕಬ್ಬಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದಂತೆ 50 ರು. ನೀಡಿದೆ. ಅದರಂತೆ ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಷುಗರ್ಸ್, ಕೆ.ಎಂ.ದೊಡ್ಡಿಯ ಚಾಂಷುಗರ್ ಕಾರ್ಖಾನೆಗಳು ತಕ್ಷಣ ರೈತರಿಗೆ ಬಾಕಿ 50 ರು. ನೀಡುವಂತೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿ ಒತ್ತಾಯಿಸಿರುವ ಅವರು, ಮೈಷುಗರ್ ರೈತರಿಗೆ 50 ರು. ನೀಡಲು ಮುಂದಾಗಿದ್ದು, ಸಾಂಕೇತಿಕವಾಗಿ 16 ಮಂದಿ ರೈತರಿಗೆ ಚೆಕ್ ವಿತರಿಸಿದೆ. ಉಳಿದ ಕಬ್ಬು ಸರಬರಾಜುದಾರರಿಗೆ ಆರ್ ಟಿಜಿಎಸ್ ಮೂಲಕ ಅವರ ಖಾತೆಗೆ ಹಣ ಜಮಾ ಮಾಡಲಿದೆ ಎಂದು ಹೇಳಿದ್ದಾರೆ.
ಈ ಹಿಂದಿನಿಂದಲೂ ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್, ಕೆ.ಎಂ.ದೊಡ್ಡಿ ಚಾಂಷುಗರ್ ಕಾರ್ಖಾನೆಗಳು ಲಾಭದಲ್ಲಿವೆ. ಇದಕ್ಕೆ ಕಬ್ಬು ಬೆಳೆಗಾರರರು ಕಾರಣ ಎಂಬುದನ್ನು ತಿಳಿಯಬೇಕು. ಮಳೆಯಾಗದೆ ಬರದಿಂದ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರಿಗೆ ನೆರವಾಗಿ ಬಾಕಿ 50 ರು. ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರೈತರಿಗೆ 50 ರು. ನೀಡದೆ ನ್ಯಾಯಾಲಯದ ಮೆಟ್ಟಿಲೇರಿರುವುದು ರೈತ ವಿರೋಧಿ ನೀತಿಯಾಗಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಕಬ್ಬು ಅರೆಯಲು ಕಾರ್ಖಾನೆ ಪ್ರಾರಂಭ ಮಾಡುವ ಮುನ್ನ ಕಬ್ಬು ಕಟಾವು ವೆಚ್ಚ ನಿಗದಿ ಮಾಡಿ ಹಂಗಾಮು ಕೊನೆವರೆಗೂ ಅದೇ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಬ್ಬು ಕಟಾವು ವೆಚ್ಚದ ಮೂಲಕ ಕಾರ್ಖಾನೆಯಿಂದಲೇ ರೈತರ ಶೋಷಣೆಯಾಗುತ್ತಿದೆ. ರೈತರ ಕಬ್ಬಿನ ಹಣ ಬಳ್ಳಾರಿ, ಮಹಾರಾಷ್ಟ್ರದವರ ಪಾಲಾಗುತ್ತಿದೆ. ಜನವರಿ ವೇಳೆಗೆ ಟನ್ ವೊಂದಕ್ಕೆ 1300 ರು., 1400 ರು. ಕಟಾವು ವೆಚ್ಚ ಆಗುತ್ತಿದೆ.
ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಕಟಾವು ವೆಚ್ಚ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.