ಸೊರವನಹಳ್ಳಿ ಪಿಡಿಓ ವಿರುದ್ಧ ಸೂಕ್ತ ತನಿಖೆ ನಡೆಸಲು ಆಗ್ರಹ

KannadaprabhaNewsNetwork |  
Published : Jul 07, 2025, 11:48 PM IST
5 ಟಿವಿಕೆ 6 – ತುರುವೇಕೆರೆಯಲ್ಲಿ ಜಿಲ್ಲಾ ಡಿಎಸ್ ಎಸ್ ನ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಪತ್ರಿಕಾಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ಸೊರವನಹಳ್ಳಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಂ.ಹನುಮಂತರಾಜು ರವರು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಅವ್ಯವಹಾರಗಳನ್ನು ಮಾಡಿದ್ದಾರೆ. ಈ ಸಂಬಂಧ ಸೂಕ್ತ ದಾಖಲಾತಿಗಳನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ದೂರು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಆಪಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಸೊರವನಹಳ್ಳಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಂ.ಹನುಮಂತರಾಜು ರವರು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಅವ್ಯವಹಾರಗಳನ್ನು ಮಾಡಿದ್ದಾರೆ. ಈ ಸಂಬಂಧ ಸೂಕ್ತ ದಾಖಲಾತಿಗಳನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ದೂರು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಆಪಾದಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸೊರವನಹಳ್ಳಿಯ ಪಿಡಿಓ ಹನುಮಂತರಾಜು, ಕೋಡಿನಾಗಸಂದ್ರದ ಸರ್ವೇ ನಂಬರ್ ನಂ 30/28, 30/3ಎ2, ರಲ್ಲಿದ್ದ ಖರಾಬು ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಬೊಮ್ಮೇನಹಳ್ಳಿಯ ಸರ್ವೇ ನಂಬರ್ 5 ಮತ್ತು 57 ರಲ್ಲಿ ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಜಮೀನನ್ನು ಬೇರೆಯವರಿಗೆ ಹಣ ಪಡೆದು ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂದು ದೂರಿದರು. ಸೊರವನಹಳ್ಳಿಯಲ್ಲಿ ಸಾಕಷ್ಟು ನಕಲಿ ಖಾತೆ ಮಾಡಲಾಗಿದೆ. ಸರ್ಕಾರಿ ಜಮೀನನ್ನು ಬೇರೆಯವರಿಗೆ ಖಾತೆ ಮಾಡಿಕೊಡುವ ಮೂಲಕ ಸರ್ಕಾರಕ್ಕೆ ನಷ್ಠ ಉಂಟು ಮಾಡಲಾಗಿದೆ. ಈ ಕುರಿತು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಜನಾಂಗಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣದ ಕುರಿತು ಯಾವುದೇ ದಾಖಲಾತಿ ನೀಡುತ್ತಿಲ್ಲ. ಮಾಹಿತಿ ಕೇಳಿದಲ್ಲಿ ಉಡಾಫೆಯ ಉತ್ತರವನ್ನು ಪಿಡಿಒ ಹನುಮಂತರಾಜು ನೀಡುತ್ತಾರೆಂದು ದಂಡಿನಶಿವರ ಕುಮಾರ್ ಹೇಳಿದರು.ಪಂಚಾಯಿತಿಯಿಂದ ಕಟ್ಟಲಾಗಿರುವ ವಾಣಿಜ್ಯ ಮಳಿಗೆಗಳ ಹರಾಜು ಮುಗಿದು ಎರಡು ವರ್ಷಗಳು ಕಳೆದರೂ ಸಹ ಇದುವರೆಗೂ ಮರು ಹರಾಜು ಪ್ರಕ್ರಿಯೆ ಮಾಡಿಲ್ಲ. ಅಲ್ಲದೇ ಆ ಅಂಗಡಿ ಮಳಿಗೆಗಳಿಂದ ಬರಬೇಕಿರುವ ಸುಮಾರು 4 ಲಕ್ಷ ರುಗಳನ್ನು ವಸೂಲು ಮಾಡಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಂದಾಯ ವಸೂಲಾತಿಯಲ್ಲಿ ಸಂಗ್ರಹವಾಗಿರುವ ಲಕ್ಷಾಂತರ ರು.ದುರುಪಯೋಗ ಆಗಿರುವ ಶಂಕೆ ಇದೆ. ಕಂದಾಯವನ್ನೂ ಸಹ ಮನಸೋ ಇಚ್ಛೆ ವಸೂಲು ಮಾಡಲಾಗುತ್ತಿದೆ. ಸಾಮಾನ್ಯ ಸಭೆ ಮತ್ತು ವಾರ್ಡ್ ಸಭೆಗಳನ್ನೂ ಸಹ ನಿಗದಿತ ಸಮಯದಲ್ಲಿ ಕರೆಯದೇ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದಂಡಿನಶಿವರ ಕುಮಾರ್ ಆರೋಪಿಸಿದರು. ಸೊರವನಹಳ್ಳಿಯಲ್ಲಿರುವ ಅಂಬೇಡ್ಕರ್ ಭವನದ ನಿವೇಶನವನ್ನು ಪೊಲೀಸ್ ಅಧಿಕಾರಿಯೋರ್ವರು ಒತ್ತುವರಿ ಮಾಡಿಕೊಂಡು ಮನೆಯನ್ನೇ ನಿರ್ಮಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ತಿಳಿದಿದ್ದರೂ ಸಹ ಪಿಡಿಒ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ದೂರು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಉಪಯೋಗಕ್ಕೆ ಇದ್ದ ಅಂಬೇಡ್ಕರ್ ಭವನದ ಒತ್ತುವರಿ ಭೂಮಿಯನ್ನು ಕೂಡಲೇ ತೆರವುಗೊಳಿಸಬೇಕೆಂದೂ ಸಹ ಅವರು ಆಗ್ರಹಿಸಿದರು. ಸಾಕಷ್ಟು ಅಕ್ರಮ ಎಸಗಿರುವ ಸೊರವನಹಳ್ಳಿ ಪಿಡಿಒ ಹನುಮಂತರಾಜು ರನ್ನು ಕೂಡಲೇ ಅಮಾನತು ಮಾಡಬೇಕು ಮತ್ತು ಆಗಿರುವ ಅವ್ಯವಹಾರದ ಕುರಿತು ಸೂಕ್ತ ತನಿಖೆ ನಡೆಸಬೇಕು. ತಪ್ಪಿದಲ್ಲಿ ಸೊರವನಹಳ್ಳಿ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸುವುದು ಅವಿವಾರ್ಯವಾಗಲಿದೆ ಎಂದು ದಂಡಿನಶಿವರ ಕುಮಾರ್ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಘಟನಾ ಸಂಚಾಲಕರಾದ ಟಿ.ಬಿ.ಕ್ರಾಸ್ ನ ಗೋವಿಂದರಾಜು ಮತ್ತು ಅಫ್ಜಲ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು