ಕೆರೆ, ಉದ್ಯಾನಗಳ ರಕ್ಷಣೆಗೆ ಒತ್ತಾಯ

KannadaprabhaNewsNetwork |  
Published : Jun 25, 2025, 11:47 PM IST
ಮುಧೋಳ ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ವಿವಿಧ ಬಡಾವಣೆಗಳಲ್ಲಿ ಉದ್ಯಾನಗಳನ್ನು ಅತಿಕ್ರಮಿಸಿ ಕಾಂಪೌಂಡ್ ನಿರ್ಮಿಸಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವುಗಳನ್ನು ತಕ್ಷಣವೇ ತೆರವುಗೊಳಿಸಿ

ಕನ್ನಡಪ್ರಭ ವಾರ್ತೆ ಮುಧೋಳ

ಕೆರೆಗಳ ಅತಿಕ್ರಮಣ ಮತ್ತು ನಗರದ ಉದ್ಯಾನಗಳ ರಕ್ಷಣೆಗೆ ಸಮೀಕ್ಷೆ ಕೈಗೊಂಡು, ಅತಿಕ್ರಮಣಗೊಂಡಿರುವ ಜಾಗದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡಗಳನ್ನು ತೆರವುಗೊಳಿಸಬೇಕು. ಕೆರೆಗಳ ಸುತ್ತಲೂ ಬಫರ್ ಜೋನ್ ನಿರ್ಮಿಸಿ ಅವುಗಳನ್ನು ರಕ್ಷಿಸುವಂತೆ ಸದಸ್ಯ ಸಂತೋಷ ಪಾಲೋಜಿ ಒತ್ತಾಯಿಸಿದರು.

ಮಂಗಳವಾರ ನಡೆದ ಮುಧೋಳ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಆಗ್ರಹಿಸಿದರು. ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನಗಳನ್ನು ಅತಿಕ್ರಮಿಸಿ ಕಾಂಪೌಂಡ್ ನಿರ್ಮಿಸಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವುಗಳನ್ನು ತಕ್ಷಣವೇ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು.

ಇನ್ನೂ ಸಭೆಯಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ನಮಗೆ ಪರ್ಸೆಂಟೇಜ್ ನೀಡಿಲ್ಲ ಆದರೆ ಹಣ ಪಾವತಿಸಿದ್ದಿರಿ ಎಂಬುದು ತೀವ್ರ ಚರ್ಚೆಗೆ ಕಾರಣವಾಯಿತು. ಓರ್ವ ಸದಸ್ಯ ಪೌರಾಯುಕ್ತರನ್ನು ನೇರವಾಗಿ ಪ್ರಶ್ನಿಸಿ, ಪರ್ಸೆಂಟೇಜ್ ನೀಡಲಾಗಿದೆಯೇ? ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಸತೀಶ ಮಲಘಾಣ ಅವರು ಸಭೆಯಲ್ಲಿ ಇಂತಹ ವಿಷಯಗಳ ಕುರಿತು ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮೂಲಸೌಕರ್ಯಗಳಿಂದ ಜನರು ವಂಚಿತ:

ನಗರದಲ್ಲಿ ಬೀದಿ ದೀಪಗಳು ಸೇರಿದಂತೆ ಇತರೆ ಮೂಲಸೌಲಭ್ಯಗಳಿಂದ ಜನರು ವಂಚಿತರಾಗಿದ್ದಾರೆ ಎಂದು ಬಿಜೆಪಿ ಸದಸ್ಯ ಗುರುಪಾದ ಕೂಳಲಿ ಆರೋಪಿಸಿದರು. ಈ ಸೌಲಭ್ಯಗಳಿಗಾಗಿ ಜನರು ಕಚೇರಿಗಳಿಗೆ ಅಲೆದಾಡಿ ಕಣ್ಣೀರು ಸುರಿಸುತ್ತಿದ್ದಾರೆ. ಸ್ಲಂ ನಿವಾಸಿಗಳಿಗೆ ಇದುವರೆಗೂ ಮನೆಗಳನ್ನು ಕಟ್ಟಿಕೊಟ್ಟಿಲ್ಲ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ಈ ಕುರಿತು ವಿಶೇಷ ಸಭೆ ಕರೆದು ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಇತರೆ ಪ್ರಮುಖ ನಿರ್ಧಾರಗಳು:

ಸಭೆಯಲ್ಲಿ ಹಿಂದಿನ ಸಮಿತಿಯ ನಡವಳಿಕೆಗಳನ್ನು ಓದಿ ದೃಢೀಕರಿಸಲಾಯಿತು. 2025 ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳ ಜಮಾ ಮತ್ತು ಖರ್ಚಿನ ಪತ್ರಿಗಳಿಗೆ ಅನುಮೋದನೆ ನೀಡಲಾಯಿತು. 2025-26ನೇ ಸಾಲಿನ ಯೋಜನೆ ಮತ್ತು ಎಸ್ಎಫ್‌ಸಿ ಹಾಗೂ ಸ್ಥಳೀಯ ನಿಧಿಯಡಿ ಶೇ.24.10, ಶೇ.7.25, ಶೇ.5 ಮತ್ತು ಶೇ.1ರ ಯೋಜನೆಗಳಿಗೆ ಕ್ರಿಯಾ ಯೋಜನೆಗಳನ್ನು ಸಾಮಾನ್ಯ ಸಭೆಯಲ್ಲಿ ಮಂಜೂರಿ ನೀಡಿದ್ದಕ್ಕೆ ದೃಢೀಕರಣ ನೀಡಲಾಯಿತು. 2025-26ನೇ ಸಾಲಿನ ಎಸ್ಎಫ್‌ಸಿ ಯೋಜನೆ ಮತ್ತು ನಗರಸಭೆ ಸಾಮಾನ್ಯ ನಿಧಿಯಡಿ ಕಚೇರಿಯ ದಿನನಿತ್ಯದ ಕೆಲಸಗಳಿಗೆ ಬೇಕಾಗುವ ಸ್ಟೇಷನರಿ, ಇತರೆ ಅಗತ್ಯ ಸಾಮಗ್ರಿಗಳ ಖರೀದಿ, ಕೆಎಂಎಫ್ ರಿಜಿಸ್ಟರ್ ಮತ್ತು ಫಾರಂಗಳು/ ಇತರ ಅಗತ್ಯ ಮುದ್ರಣ ಸಾಮಗ್ರಿಗಳ ಖರೀದಿಗೆ ಕರೆದ ವಾರ್ಷಿಕ ಟೆಂಡರ್‌ನಲ್ಲಿ ಪೂರೈಕೆದಾರರು ಸಲ್ಲಿಸಿದ ದರಗಳಿಗೆ ಅನುಮೋದನೆ ನೀಡಲಾಯಿತು. ಸ್ವಚ್ಛ ಭಾರತ ಮಿಷನ್ 1.0 ಯೋಜನೆಯ ಉಳಿಕೆ ಅನುದಾನದಲ್ಲಿ ವಾಹನ/ ಯಂತ್ರೋಪಕರಣಗಳನ್ನು ಖರೀದಿಸಲು ಕರೆದ ಟೆಂಡರ್ ದರಗಳಿಗೂ ಅನುಮೋದನೆ ದೊರೆಯಿತು.

ಇ-ಖಾತಾ ಅಭಿಯಾನದಡಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಮೂರು ತಿಂಗಳ ಅವಧಿಗೆ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಿಕೊಳ್ಳುವ ಕುರಿತು ನಿರ್ಣಯಿಸಲಾಯಿತು. ಕಚೇರಿಗೆ ಅಗತ್ಯವಿರುವ ಜೆರಾಕ್ಸ್ ಮಷಿನ್ ಖರೀದಿಗೆ ಆಹ್ವಾನಿಸಲಾದ ಕೊಟೇಶನ್‌ನಲ್ಲಿ ಪೂರೈಕೆದಾರರು ಸಲ್ಲಿಸಿದ ದರಗಳಿಗೂ ಅನುಮೋದನೆ ನೀಡಲಾಯಿತು. ಅಂತಿಮವಾಗಿ 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ₹278 ಲಕ್ಷ ಗಳಿಗೆ ತಯಾರಿಸಿದ ಕ್ರಿಯಾ ಯೋಜನೆಗೆ ಸಾಮಾನ್ಯ ಸಭೆ ಮಂಜೂರಿ ನೀಡಿರುವುದಕ್ಕೆ ದೃಢೀಕರಣ ನೀಡಲಾಯಿತು.

ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಅರ್ಧಕ್ಕೆ ನಿಂತಿರುವ ಕಟ್ಟಡವನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಎಂ.ಆರ್.ಎಫ್ ಶೆಡ್ ನಿರ್ಮಿಸಲು ಸಹ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು.

ಸಾಮಾನ್ಯ ಸಭೆಯು ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ ಅಧ್ಯಕ್ಷತೆಯಲ್ಲಿ ನಡೆಯಿತು. ಪೌರಾಯುಕ್ತ ಗೋಪಾಲ ಕಾಸೆ, ವ್ಯವಸ್ಥಾಪಕಿ ಭಾರತಿದೇವಿ ಜೋಶಿ , ಎಂಜಿನಿಯರ್‌ಗಳಾದ ರಾಜು ಚವ್ಹಾಣ, ಮಲ್ಲಪ್ಪ ಹೊಸೂರ, ಗಣೇಶ ಬುರುಡ ಹಾಗೂ ಸದಸ್ಯರಾದ ಸ್ವಾತಿ ಕುಲಕರ್ಣಿ, ಅಶೋಕ ಗೌವರೋಜಿ, ಶಿವಾನಂದ ಡಂಗಿ, ಯಲ್ಲವ್ವ ಅಂಬಿ, ಲತಾ ಗಾಯಕವಾಡ, ಸುನಿಲ ನಿಂಬಾಳ್ಕರ, ಸದಾಶಿವ ಜೋಶಿ, ಸುರೇಶ ಕಾಂಬಳೆ, ಜುಬೇದಾ ಕೊನ್ನೂರ, ಲಕ್ಷ್ಮಿ ದಾಸರ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ