ಶಿರಸಿ: ಕಸ್ತೂರಬಾ ನಗರದ ಶಾಲ್ಮಲಾ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಸೇರಿದಂತೆ ಹಲವು ಮೂಲ ಸೌಕರ್ಯಗಳ ಕೊರತೆಯಿದ್ದು, ಅವುಗಳನ್ನು ಶೀಘ್ರ ಪರಿಹರಿಸುವಂತೆ ಸ್ಥಳೀಯ ನಾಗರಿಕರು ಶಾಸಕ ಭೀಮಣ್ಣ ಟಿ. ನಾಯ್ಕ ಅವರಿಗೆ ಮನವಿ ಮಾಡಿದರು.ಸೋಮವಾರ ಶಾಲ್ಮಲಾ ಬಡಾವಣೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನೇರವಾಗಿ ಭೇಟಿ ನೀಡಿದ ಶಾಸಕರು, ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಸಾರ್ವಜನಿಕರ ಸಮಸ್ಯೆಗಳನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳು ಮಾತನಾಡಿ, ಸುಸಜ್ಜಿತ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಹಾಗೂ ನಿತ್ಯ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿಕೊಡಬೇಕು ಎಂದು ಶಾಸಕರಲ್ಲಿ ವಿನಂತಿಸಿಕೊಂಡರು.ಸಾರ್ವಜನಿಕರ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ ಶಾಸಕ ಭೀಮಣ್ಣ ನಾಯ್ಕ್, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಕ್ಷಣವೇ ಯೋಜನಾ ವರದಿ ಸಿದ್ಧಪಡಿಸಿ, ಯಾವುದೇ ವಿಳಂಬವಿಲ್ಲದೆ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಆರಂಭಿಸುವಂತೆ ಸೂಚನೆ ನೀಡಿದರು. ಅಲ್ಲದೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.ಕ್ಷೇತ್ರದ ಪ್ರತಿಯೊಂದು ಬಡಾವಣೆ ಹಾಗೂ ಹಳ್ಳಿಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಲು ಶ್ರಮಿಸಲಾಗುವುದು ಎಂದು ಶಾಸಕರು ಇದೇ ವೇಳೆ ಭರವಸೆ ನೀಡಿದರು.ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಸೇರಿದಂತೆ ನಗರದ ನಿವಾಸಿಗಳು ಮತ್ತು ಶಾಸಕರ ಅಭಿಮಾನಿಗಳು ಪಾಲ್ಗೊಂಡಿದ್ದರು. ಮಹಾತ್ಮ ಗಾಂಧೀಜಿ ಕ್ವಿಜ್: 1,000ಕ್ಕೂ ಅಧಿಕ ವಿದ್ಯಾರ್ಥಿಗಳ ಭಾಗಿ
ಮಹಾತ್ಮ ಗಾಂಧೀಜಿಯವರ ಜೀವನ, ಸ್ವಾತಂತ್ರ್ಯ ಹೋರಾಟ, ವಿಚಾರಧಾರೆ ಹಾಗೂ ದೇಶದ ಸ್ವಾತಂತ್ರ್ಯ ಚಳವಳಿಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕಾರವಾರ ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಕ್ವಿಜ್ ಸ್ಪರ್ಧೆಯಲ್ಲಿ ಶಿವಾಜಿ ಕಾಲೇಜಿನ ಬಿಇಡಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ತೆಹರಿನ್ ರಿಯಾಜ್ ಅಹಮದ್ ಗುಲಾಮಲಿ ಪ್ರಥಮ ಸ್ಥಾನ ಪಡೆದರು. ಅವರಿಗೆ ಸ್ಯಾಮ್ಸಂಗ್ ಮೊಬೈಲ್ ಫೋನ್ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.ದ್ವಿತೀಯ ಹಾಗೂ ತೃತೀಯ ಸ್ಥಾನ ಸೇರಿದಂತೆ ಸುಮಾರು 30 ವಿದ್ಯಾರ್ಥಿಗಳಿಗೆ ವಿವಿಧ ಬಹುಮಾನಗಳು ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸುಮಾರು 100 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ರಾಷ್ಟ್ರೀಯ ಸೇವಾದಳದ ಸಂಯೋಜಕ ಸೂರಜ್ ನಾಯಕ, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ರಾಜ್ಯ ಸಂಯೋಜಕ ಸೈಯದ್ ಅಶ್ರಫ್ ಖಾದ್ರಿ, ಸೇವಾದಳದ ಪದಾಧಿಕಾರಿಗಳಾದ ಸುರೇಖಾ ವಾರೇಕರ್, ರಾಮಕೃಷ್ಣ ನಾಯ್ಕ್ ಮತ್ತಿತರರು ಇದ್ದರು.