ಕನ್ನಡಪ್ರಭ ವಾರ್ತೆ ಶಿಕಾರಿಪುರ
ಹೊಟ್ಟೆಪಾಡಿಗಾಗಿ ಕಾಂಗ್ರೆಸ್ ಮರಿಪುಡಾರಿಗಳು ಸರ್ಕಾರಿ ಕಚೇರಿಗಳಲ್ಲಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಶಾಸಕ ವಿಜಯೇಂದ್ರರ ಆರೋಪ ಕಾಂಗ್ರೆಸ್ ಕಾರ್ಯಕರ್ತರನ್ನು ಅಪಮಾನಿಸುವ ಜತೆಗೆ ಆಕ್ರೋಶವನ್ನು ಹುಟ್ಟಿಹಾಕಿದೆ. ಸತತ 4 ದಶಕದಿಂದ ತಾಲೂಕಿನಲ್ಲಿ ಬಿಜೆಪಿ ಶಾಸಕರಿದ್ದು ಎಂದಿಗೂ ಅವರ ಮನೆಬಾಗಿಲಿನಲ್ಲಿ ಕೈಕಟ್ಟಿ ನಿಲ್ಲದ 40-50 ಸಾವಿರ ಕಾಂಗ್ರೆಸ್ ಕಟ್ಟಾ ಕಾರ್ಯಕರ್ತರಿದ್ದಾರೆ. ಕ್ಷುಲ್ಲಕ ಹೇಳಿಕೆ ಬಗ್ಗೆ ಶಾಸಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ತಪ್ಪಿದಲ್ಲಿ ಕ್ಷೇತ್ರಕ್ಕೆ ಆಗಮಿಸಿದಾಗ ಎಲ್ಲ ಕಾರ್ಯಕ್ರಮದಲ್ಲಿ ಘೇರಾವ್ ಹಾಕಲಾಗುವುದು ಎಂದು ತಾ.ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ, ರಾಜ್ಯ ಕೆಪಿಸಿಸಿ ಪ್ರ.ಕಾ ನಾಗರಾಜಗೌಡ ಎಚ್ಚರಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ 1983-84ರಿಂದ ಯಡಿಯೂರಪ್ಪನವರು ಶಾಸಕರಾಗಿ, ವಿಪಕ್ಷ ನಾಯಕರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಸಂಸದರಾಗಿದ್ದು, ನಂತರ ಮಕ್ಕಳು ಸಹ ಸಂಸದ, ಶಾಸಕರಾಗಿದ್ದಾರೆ. ಸತತ 40 ವರ್ಷಗಳಿಂದ ತಾಲೂಕಿನ ಆಡಳಿತ ಮಾಡುತ್ತಿರುವ ಕುಟುಂಬ ವರ್ಗ, ಭೂಕನಕೆರೆಯಿಂದ ಬಂದ ಸಂದರ್ಭದಲ್ಲಿ ಹಾಗೂ ಇಂದಿನ ಆರ್ಥಿಕ ಸ್ಥಿತಿಗತಿ, ಸ್ತಿರಾಸ್ತಿಯನ್ನು ಬಹಿರಂಗಪಡಿಸಲಿ ಎಂದರು. ಕಳೆದ 4 ದಶಕಗಳಿಂದ ಬಿಜೆಪಿ ಶಾಸಕರಿದ್ದರೂ ತಾಲೂಕಿನ ಸ್ವಾಭಿಮಾನಿ 45-50 ಸಾವಿರ ಕಾಂಗ್ರೆಸಿಗರು, ಮತದಾರರು ಗಟ್ಟಿಯಾಗಿದ್ದು ಎಂದಿಗೂ ಶಾಸಕರ ಸಂಸದರ ಮನೆಗೆ ಹೋಗಿ ಕೈ ಚಾಚುವ ಕೆಲಸ ಮಾಡಿಲ್ಲ ಎಂದರು.
ಇದುವರೆಗೂ ಸ್ಥಳೀಯ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ವಿರುದ್ದ ಭ್ರಷ್ಟಾಚಾರದ ಆರೋಪಗಳಿಲ್ಲ. ಪ್ರಕರಣ ಸಹ ದಾಖಲಾಗಿಲ್ಲ. ತಂದೆಯ ಸಹಿ ನಕಲು ಮಾಡಿ ಆರ್ಟಿಜಿಎಸ್ ಚೆಕ್ ಮೂಲಕ ಲಂಚ ಪಡೆದ ಬಿಜೆಪಿ ಪುಡಾರಿಯನ್ನು ರಾಜ್ಯದ ಜನತೆ ಮರೆತಿಲ್ಲ ಎಂದು ಟೀಕಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರ ಮೆಕ್ಕೆಜೋಳ ಬೆಳೆಗೆ ರು.2400 ಬೆಂಬಲ ಬೆಲೆ ಘೋಷಿಸಿ ಕಳೆದ 29ರಿಂದ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿ ಕಳೆದ 15ರಿಂದ ನೋಂದಣಿ ಆರಂಭಿಸಿ ಫೆ.28 ರವರೆಗೆ ಖರೀದಿಸಲು ಎಲ್ಲ ಎಪಿಎಂಸಿಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಆರಂಭದಿಂದ ಬಗರ್ ಹುಕುಂ ಮತ್ತು ಅರಣ್ಯ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಯಾವುದೇ ನೋಟೀಸ್ ನೀಡಿಲ್ಲ. ತಾಲೂಕಿಗೆ ಇದುವರೆಗೂ ರು.410 ಕೋಟಿಗೂ ಅಧಿಕ ಮೌಲ್ಯದ ಗ್ಯಾರಂಟಿ ಯೋಜನೆ ಅನುದಾನ ದೊರಕಿದೆ ಎಂದರು.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ರೈತರ ಮಂಜೂರು ಜಮೀನನ್ನು ಅರಣ್ಯಕ್ಕೆ ಸೇರಿಸಲು ಪಹಣಿಯಲ್ಲಿ ಜಮೀನನ್ನು ಅರಣ್ಯಕ್ಕೆ ಇಂಡೀಕರಣಗೊಳಿಸಿ, ನೋಟೀಸ್ ನೀಡಿಲಾಗಿದ್ದು, ಬಿಜೆಪಿ ಅಧಿಕಾರಾವಧಿಯಲ್ಲಿ ರೈತ ಪರವಾದ ಕೆಲಸ ಮಾಡದೆ, ಅಧಿಕಾರ ಇಲ್ಲದೇ ಇದೀಗ ರೈತರ ಬಗ್ಗೆ ಕಾಳಜಿಯ ನಾಟಕ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಪಾರಿವಾಳದ ಮಾತನಾಡಿ, ಶಾಸಕರ ಉದ್ದಟತನದ ಹೇಳಿಕೆಗೆ ಕ್ಷೇತ್ರದ ಜನತೆ ಭವಿಷ್ಯದಲ್ಲಿ ಸ್ಪಷ್ಟ ಉತ್ತರ ನೀಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಕೆ.ಡಿ.ಪಿ ಸದಸ್ಯ ಉಮೇಶ್ ಮಾರವಳ್ಳಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಸ್ಲಂಬಾಷಾ, ಆರೋಗ್ಯ ರಕ್ಷ ಸಮಿತಿ ಸದಸ್ಯ ಮಂಜುನಾಥ್, ನಾಗರಾಜ್, ಪ್ರೇಮಕುಮಾರ್ ನಾಯ್ಕ, ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಯ್ಕ, ಪುರಸಭೆ ನಾಮನಿರ್ದೇಶಿತ ಸದಸ್ಯ ಸುರೇಶ್ ಧಾರವಾಡದ, ರೇಣುಕಯ್ಯಸ್ವಾಮಿ, ಶಿವು ಮತ್ತಿತರರು ಹಾಜರಿದ್ದರು.