ಯಲ್ಲಮ್ಮಾ ದೇವಸ್ಥಾನಕ್ಕೆ ರೈಲು ಮಾರ್ಗಕ್ಕೆ ಆಗ್ರಹ

KannadaprabhaNewsNetwork | Published : Dec 17, 2024 1:01 AM

ಸಾರಾಂಶ

ಕಳೆದ 30 ವರ್ಷಗಳಿಂದ ಸವದತ್ತಿ ಯಲ್ಲಮ್ಮಾ ದೇವಸ್ಥಾನಕ್ಕೆ ರೈಲು ಮಾರ್ಗವಾಗಬೇಕೆಂದು ಈ ಭಾಗದ ಜನರ ಆಸೆ ಇದ್ದು, ಇಂದು ನಡೆಯುತ್ತಿರುವ ಹೋರಾಟವು ರೈಲು ಮಾರ್ಗ ನಿರ್ಮಾಣಕ್ಕೆ ಭದ್ರಬುನಾದಿಯಾಗಲಿದೆ ಎಂದು ಮಾಜಿ ಶಾಸಕ ಸುಭಾಸ ಕೌಜಲಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಕಳೆದ 30 ವರ್ಷಗಳಿಂದ ಸವದತ್ತಿ ಯಲ್ಲಮ್ಮಾ ದೇವಸ್ಥಾನಕ್ಕೆ ರೈಲು ಮಾರ್ಗವಾಗಬೇಕೆಂದು ಈ ಭಾಗದ ಜನರ ಆಸೆ ಇದ್ದು, ಇಂದು ನಡೆಯುತ್ತಿರುವ ಹೋರಾಟವು ರೈಲು ಮಾರ್ಗ ನಿರ್ಮಾಣಕ್ಕೆ ಭದ್ರಬುನಾದಿಯಾಗಲಿದೆ ಎಂದು ಮಾಜಿ ಶಾಸಕ ಸುಭಾಸ ಕೌಜಲಗಿ ಹೇಳಿದರು.

ಪಟ್ಟಣದಲ್ಲಿ ತಾಲೂಕು ರೈಲ್ವೆ ಹೋರಾಟ ಕ್ರಿಯಾ ಸಮಿತಿಯವರಿಂದ ಸೋಮವಾರ ಸವದತ್ತಿ ಯಲ್ಲಮ್ಮಾ ರೈಲ್ವೆ ಮಾರ್ಗಕ್ಕಾಗಿ ಹಮ್ಮಿಕೊಂಡ ಬೃಹತ್ತ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ರೈಲು ಮಾರ್ಗಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಈ ಹೋರಾಟವು ಯಶಸ್ವಿಯಾಗಲಿ ಎಂದರು.ತಾಲೂಕು ರೈಲ್ವೆ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಆರ್.ಬಿ.ಶಂಕರಗೌಡರ ಮಾತನಾಡಿ, ಪವಿತ್ರ ಪುಣ್ಯಕ್ಷೇತ್ರವಾಗಿರುವ ಯಲ್ಲಮ್ಮಾ ದೇವಸ್ಥಾನಕ್ಕೆ ರೈಲು ಮಾರ್ಗವು ಎರಡ್ಮೂರು ದಶಕಗಳ ಹಿಂದೆಯೇ ಆಗಬೇಕಿತ್ತು. ಅನಿವಾರ್ಯ ಕಾರಣಗಳಿಂದಾಗಿ ಇದುವರೆಗೂ ಯಾವ ಸೌಲಭ್ಯತೆಗಳು ಸಹ ಈ ಭಾಗದಲ್ಲಿ ಸಿಗದಾಗಿರುವುದು ವಿಷಾದನೀಯ ಎಂದರು. ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದಾದರೇ ಸವದತ್ತಿಯನ್ನು ಸಹ ಜಿಲ್ಲೆಯಾಗಿ ಪರಿವರ್ತನೆ ಮಾಡಬೇಕು. ಸವದತ್ತಿಯು ಜಿಲ್ಲೆಯಾಗಿ ಪರಿವರ್ತನೆಯಾಗಲು ಎಲ್ಲ ರೀತಿಯಿಂದಲೂ ಯೋಗ್ಯವಾಗಿದ್ದು, ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನ ಸೇರಿದಂತೆ ಭೌಗೋಳಿಕವಾಗಿ ಇಲ್ಲಿನ ಅನೇಕ ಧಾರ್ಮಿಕ ಕೇಂದ್ರಗಳು ಸವದತ್ತಿಯು ಜಿಲ್ಲಾ ಕೇಂದ್ರವಾಗಲು ಪೂರಕವಾಗಿವೆ ಎಂದರು.ಬಿಜೆಪಿ ಮುಖಂಡ ವಿರುಪಾಕ್ಷಣ್ಣ ಮಾಮನಿ ಮತ್ತು ಕಾಂಗ್ರೆಸ್ ಮುಖಂಡ ಅಶ್ವತ ವೈದ್ಯ ಮಾತನಾಡಿ, ರೈಲು ಮಾರ್ಗದ ನಿರ್ಮಾಣಕ್ಕೆ ನಾವು ಪಕ್ಷಾತೀತವಾಗಿ ಸಂಪೂರ್ಣ ಸಹಕಾರ ನೀಡಲಿದ್ದು, ಈ ಭಾಗದಲ್ಲಿ ವಾಣಿಜ್ಯ ಮತ್ತು ಪ್ರವಾಸೋದ್ಯಮದ ಅಭಿವೃದ್ದಿಗೆ ಯಲ್ಲಮ್ಮಾ ರೈಲು ಮಾರ್ಗ ಅತ್ಯಂತ ಸೂಕ್ತವಾಗಿದೆ ಎಂದರು.ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್‌ ಖಾಜಿ ಮಾತನಾಡಿ, ಈ ಭಾಗದಲ್ಲಿ ರೈಲು ನಿರ್ಮಾಣಕ್ಕೆ ಯಾವುದೇ ಅಡಚಣೆಗಳಿಲ್ಲದಾಗಿದ್ದು, ರಾಜ್ಯ ಸರ್ಕಾರವು ಭೂಮಿ ಕೊಡಿಸಿದಲ್ಲಿ ಕೇಂದ್ರ ಸರ್ಕಾರವು ರೈಲು ಮಾರ್ಗ ನಿರ್ಮಾಣಕ್ಕೆ ಸಿದ್ಧವಾಗಿದೆ ಎಂದರು. ಯಲ್ಲಮ್ಮಾ ದೇವಸ್ಥಾನಕ್ಕೆ ಪ್ರತಿವರ್ಷ ೧.೫೦ಕೋಟಿ ಭಕ್ತರು ಆಗಮಿಸುತ್ತಿದ್ದು, ಅದರಂತೆ ಶಿರಸಂಗಿ ಕಾಳಮ್ಮಾ ದೇವಸ್ಥಾನ, ಗೊಡಚಿ ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಲಕ್ಷಾಂತರ ಜನರು ಆಗಮಿಸುತ್ತಿದ್ದು, ಈ ಭಾಗದಲ್ಲಿ ರೈಲ್ವೆ ಮಾರ್ಗ ತರವುದು ನಿಶ್ಚಿತ. ಅಧಿವೇಶನ ಮುಗಿಯುವವರೆಗೂ ಸವದತ್ತಿಯ ಗಾಂಧಿಚೌಕ್‌ದಲ್ಲಿ ನಿರಂತರ ಧರಣಿ ಸತ್ಯಾಗ್ರಹವನ್ನು ನಡೆಸಲಾಗುತ್ತಿದೆ ಎಂದರು. ನಿಡಸೋಶಿಯ ಶಿವಲಿಂಗೇಶ್ವರ ಸ್ವಾಮೀಜಿ, ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಬೆಳಗ್ಗೆ ಪ್ರತಿಭಟನಾಕಾರರು ಯಲ್ಲಮ್ಮನ ದರ್ಶನ ಪಡೆದು ಪಾದಯಾತ್ರೆ ಮೂಲಕ ಎಪಿಎಂಸಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಎಪಿಎಂಸಿ ಹತ್ತಿರ ಎಲ್ಲರೂ ಸೇರಿ ಪ್ರತಿಭಟನೆ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮಿನಿ ವಿಧಾನಸೌಧಕ್ಕೆ ತೆರಳಿ ಗ್ರೇಡ್-೨ ತಹಸೀಲ್ದಾರ್‌ ಎಂ.ಎನ್.ಮಠದರವರಿಗೆ ಮನವಿ ಸಲ್ಲಿಸಿದರು.ಫಕ್ರುಸಾಬ್‌ ನದಾಫ, ಗೈಬು ಜೈನುದ್ದೀನ, ಅಮೀರ್‌ ಗೋರಿನಾಯಕ, ಆಸಿಪ್ ಬಾಗೋಜಿಕೊಪ್ಪ, ಐ.ಪಿ.ಪಾಟೀಲ, ರಾಜಶೇಖರ ನಿಡವಣಿ, ಬಿ.ಎಸ್.ಕಪ್ಪಣ್ಣವರ, ಸದಾಶಿವ ಕೌಜಲಗಿ, ಬಸವರಾಜ ಪುರದಗುಡಿ, ಮಲ್ಲಿಕಾರ್ಜುನ ಬೀಳಗಿ, ಮದನಲಾಲ ಚೋಪ್ರಾ, ಎಫ್.ವೈ.ಗಾಜಿ, ಬಸವರಾಜ ಪ್ರಭುನವರ, ರಾಜು ಮಣ್ಣಿಕೇರಿ, ಅಲ್ಲಮಪ್ರಭು ಪ್ರಭುನವರ, ಎಂ.ಎನ್.ಮುತ್ತಿನ, ಬಸವರಾಜ ಗುರುಣ್ಣವರ, ಶ್ರೀಕಾಂತ ಹಟ್ಟಿಹೊಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article