ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಸದಸ್ಯರು ತಾಲೂಕು ಸಂಚಾಲಕ ಕೃಷ್ಣಮೂರ್ತಿ ದೇವಿಪುರ ನೇತೃತ್ವದಲ್ಲಿ ದಲಿತರ ಭೂಮಿ, ವಸತಿ ಹಕ್ಕಿಗಾಗಿ ಮತ್ತು ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ, ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ತಾಲೂಕು ಸಂಚಾಲಕ ಕೃಷ್ಣಮೂರ್ತಿ ದೇವಿಪುರ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ (ದರಖಾಸ್ತು ಮಂಜೂರಾತಿ ಸಕ್ರಮೀಕರಣ) ಕಾಲಮಿತಿಯೊಳಗಾಗಿ ಇತ್ಯರ್ಥಗೊಳಿಸಬೇಕು ಹಾಗೂ ವಿನಾಕಾರಣ ವಜಾಗೊಳಿಸಿರುವ ಬಗರ್ ಹುಕುಂ ಸಾಗುವಳಿಯ ಅರ್ಜಿಗಳನ್ನು ಮರು ಪರಿಶೀಲಿಸಬೇಕು. ಪರಿಶಿಷ್ಟರ ಪಿ.ಟಿ.ಸಿ.ಎಲ್ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಯ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹೈಕೋರ್ಟ್‌ಗಳಲ್ಲಿ ಪಿ.ಟಿ.ಸಿ.ಎಲ್ ಪ್ರಕರಣಗಳು ವಜಾಗೊಳ್ಳುತ್ತಿದ್ದು, ನುರಿತ ಹಿರಿಯ ವಕೀಲರನ್ನು ನೇಮಿಸಿ ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಬೆಂಗಳೂರು ನಗರ ಜಿಲ್ಲೆ, ಪೂರ್ವ ತಾಲೂಕಿನ ಕಾಡುಗೋಡಿ ಪ್ಲಾಂಟೇಷನ್‌ನಲ್ಲಿ ಪರಿಶಿಷ್ಟ ಜಾತಿಯವರಿಗೆ ಮಂಜೂರಾಗಿರುವ ಭೂಮಿಯಲ್ಲಿ ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುವುದನ್ನು ಕೂಡಲೇ ತಡೆಗಟ್ಟಬೇಕು. ಅಧಿಕಾರಿಗಳ ವಿರುದ್ಧ ಎಸ್.ಸಿ/ ಎಸ್.ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು.ಕೈಗಾರಿಕೆ ಸ್ಥಾಪನೆ ನೆಪದಲ್ಲಿ ಕೆಐಎಡಿಬಿ ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಗುರುತಿಸಿರುವ ೧೭೭೭ ಎಕರೆ ಫಲವತ್ತಾದ ಕೃಷಿ ಭೂಮಿಯ ಭೂಸ್ವಾಧೀನ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ನಿರ್ವಹಣೆಗೆ ಸರ್ಕಾರ ಸ್ಥಾಪಿಸಿರುವ ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ಅಗತ್ಯವಿರುವ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯ ಒದಗಿಸಬೇಕು. ಎಸ್‌ಸಿಎಸ್‌ಪಿ-ಟಿಎಸ್‌ಪಿ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಾಲಯ ಅಥವಾ ಏಕ ಗವಾಕ್ಷಿ ಯೋಜನೆ ವ್ಯವಸ್ಥೆ ಜಾರಿಗೊಳಿಸಬೇಕು. ಸಮಾಜ ಕಲ್ಯಾಣ ಇಲಾಖೆಯಡಿಯ ವಿದ್ಯಾರ್ಥಿ ನಿಲಯಗಳನ್ನು ಉನ್ನತೀಕರಣಗೊಳಿಸಿ, ಪರಿಶಿಷ್ಟ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯೊಳಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ. ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ವಂದಿಸಿ, ದಲಿತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸುತ್ತೇವೆ ಎಂದರು.ಪ್ರತಿಭಟನೆಯಲ್ಲಿ ತಾಲೂಕು ಘಟಕದ ಸದಸ್ಯರಾದ ರಾಗಿಹಳ್ಳಿಕಾವಲಿನ ಪವನ್ ಕುಮಾರ್, ಗೋಪನಹಳ್ಳಿಯ ಮಂಜು, ಭದ್ರೇಶ್ ಎಂಎ, ಬೇಡಿಗನಹಳ್ಳಿ ರವಿಕುಮಾರ್, ಮಂಗಳವಾಡಿ ನವೀನ್ ಕುಮಾರ್, ಆನೆಕನ್ನಂಬಾಡಿಯ ರಾಮಚಂದ್ರು, ಹಳ್ಳಿಮೈಸೂರು ದೇವರಾಜು, ಇತರರು ಬಾಗವಹಿಸಿದ್ದರು.