15ನೇ ಹಣಕಾಸು ಯೋಜನೆಯ ₹2186 ಕೋಟಿ ಬಿಡುಗಡೆಗೆ ಆಗ್ರಹ

KannadaprabhaNewsNetwork |  
Published : Jul 04, 2026, 02:00 AM IST
ಈಶ್ವರ ಬಿ.ಖಂಡ್ರೆ | Kannada Prabha

ಸಾರಾಂಶ

ರಾಜ್ಯಕ್ಕೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 2025-26ನೇ ಸಾಲಿನಲ್ಲಿ ಬಾಕಿ ಇರುವ 2186 ಕೋಟಿ ರು.ಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ.ಖಂಡ್ರೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ನವದೆಹಲಿ ರಾಜ್ಯಕ್ಕೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 2025-26ನೇ ಸಾಲಿನಲ್ಲಿ ಬಾಕಿ ಇರುವ 2186 ಕೋಟಿ ರು.ಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ.ಖಂಡ್ರೆ ಒತ್ತಾಯಿಸಿದರು. ನವದೆಹಲಿಯಲ್ಲಿ ಶುಕ್ರವಾರ ನಡೆದ 16ನೇ ಹಣಕಾಸು ಆಯೋಗದ ಶಿಫಾರಸು, ಕಾರ್ಯಾಚರಣೆ ಮಾರ್ಗಸೂಚಿಗಳು, ಅನುದಾನ ಬಿಡುಗಡೆ ಪ್ರಕ್ರಿಯೆ, ಅನುಸರಣೆ ಷರತ್ತುಗಳು, ಪ್ರಮುಖ ಸವಾಲುಗಳು ಮತ್ತು ಅವುಗಳಿಗೆ ಪರಿಹಾರ ಕುರಿತಂತೆ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದರು. ಕೇಂದ್ರ ಪಂಚಾಯತ್ ರಾಜ್ ಇಲಾಖೆ ಎತ್ತಿದ್ದ ಎಲ್ಲಾ ಪ್ರಶ್ನೆಗಳಿಗೆ ರಾಜ್ಯ ಪ್ರತಿಕ್ರಿಯಿಸಿದೆ ಮತ್ತು ನಿರಂತರ ಅನುಸರಣೆ ಮಾಡಿದೆ. ಆದರೂ 2025-26ರ ಸಾಲಿನ ಅನುದಾನವನ್ನು ಕರ್ನಾಟಕದ ಗ್ರಾಪಂಗಳಿಗೆ ಬಿಡುಗಡೆ ಮಾಡಿಲ್ಲ. ಹಣ ಬಿಡುಗಡೆ ವಿಳಂಬ ಮಾಡುವುದರಿಂದ ರಾಜ್ಯದ ಅಭಿವೃದ್ಧಿಯ ಮೇಲಾಗುವ ದುಷ್ಪರಿಣಾಮಗಳನ್ನು ವಿವರಿಸಿದ ಅವರು, 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಹಂಚಿಕೆಯಾದ 13392 ಕೋಟಿ ರು. ಪೈಕಿ ರಾಜ್ಯ ಸರ್ಕಾರ 2021-22 ರಿಂದ 2025-26ರ 4 ವರ್ಷದ ಅವಧಿಯಲ್ಲಿ 11068 ಕೋಟಿ ರು. ಮಾತ್ರ ರಾಜ್ಯಕ್ಕೆ ಬಂದಿದ್ದು, ಅದನ್ನು ಸಂಬಂಧಿತ ಪಂಚಾಯಿತಿಗಳಿಗೆ ವರ್ಗಾಯಿಸಲಾಗಿದೆ, ಇನ್ನೂ 2186.20 ಕೋಟಿ ರು. ರಾಜ್ಯಕ್ಕೆ ಬರಬೇಕಾದ ಬಾಕಿ ಇದೆ ಎಂದು ವಿವರಿಸಿದರು.

ರಾಜ್ಯ ಪಂಚಾಯತಿಗಳಿಗೆ ₹18,889 ಕೋಟಿ:

16ನೇ ಹಣಕಾಸು ಆಯೋಗದ ಶಿಫಾರಸಿನಂತೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15,111ಕೋಟಿ ರು.ಮೂಲ ಅನುದಾನ, 3,778 ಕೋಟಿ ಕಾರ್ಯ ಸಾಮರ್ಥ್ಯ ಅನುದಾನ ಸೇರಿ 18,889 ಕೋಟಿ ರು. ಹಣ ಮುಂದಿನ 5 ವರ್ಷಗಳಿಗೆ ಹಂಚಿಕೆ ಆಗಿದೆ. ರಾಜ್ಯದ ಪಂಚಾಯಿತಿಗಳು ಗ್ರಾಮೀಣ ಆಸ್ತಿಗಳಿಂದ ಶೇ.80ರಷ್ಟು ತೆರಿಗೆ ಸಂಗ್ರಹ ಗುರಿ ಸಾಧಿಸಿವೆ ಎಂದು ಸಚಿವರು ತಿಳಿಸಿದರು.

ಗ್ರಾಮೀಣ ಸ್ಥಳೀಯ ಸಂಸ್ಥೆ ಅನುದಾನಗಳಿಗೆ ಸಂಬಂಧಿಸಿದ 15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕಾರ್ಯಾಚರಣಾ ಮಾರ್ಗಸೂಚಿಗಳ ಪ್ಯಾರಾ 5(ಎ) ಅಡಿಯಲ್ಲಿ ನಿಗದಿಪಡಿಸಲಾದ ಎಲ್ಲಾ ನಿಗದಿತ ಷರತ್ತುಗಳನ್ನು ಕರ್ನಾಟಕ ರಾಜ್ಯವು ಪಾಲಿಸಿದೆ ಎಂದೂ ಖಂಡ್ರೆ ತಿಳಿಸಿದರು.

ರಾಜ್ಯವು 2024-25ರ ಆರ್ಥಿಕ ವರ್ಷಕ್ಕೆ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನು 2025ರಲ್ಲೇ ಒದಗಿಸಿದೆ. ಅಲ್ಲದೆ, ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಆಗಸ್ಟ್ 2025ರೊಳಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ಅಪ್ಲೋಡ್ ಮಾಡುವುದನ್ನು ಪೂರ್ಣಗೊಳಿಸಿವೆ ಎಂಬ ಅಂಶವನ್ನೂ ಸಭೆಯ ಗಮನಕ್ಕೆ ತಂದರು.

ಈ ಬಾರಿ ಎಲ್‌ನಿಲ್ನೋ ಪ್ರಭಾವದಿಂದ ಕರ್ನಾಟಕ ರಾಜ್ಯವು ಮಳೆಯ ಕೊರತೆ ಎದುರಿಸುತ್ತಿದೆ. ಗ್ರಾಮೀಣ ಜನರಿಗೆ ನೀರು ಪೂರೈಕೆ ನಮ್ಮ ಆದ್ಯತೆಯಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಕುಡಿಯುವ ನೀರು ಪೂರೈಕೆಗೂ ತೊಡಕಾಗುತ್ತದೆ. ಕೂಡಲೇ, ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಬಾಕಿ ಇರುವ 2186.20 ಕೋಟಿ ರು. ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಲ್ಲ ಘಟನೆ ಖಂಡಿಸಿ ಹಿಂದು ಜಾಗರಣ ವೇದಿಕೆ ಪ್ರತಿಭಟನೆ
ಅಗತ್ಯ ಕಂಡುಬಂದರೆ ಬರಗಾಲ ಘೋಷಣೆ ಕುರಿತು ತೀರ್ಮಾನ