ನರೇಗಾ ಕೂಲಿ ಹಣ ಬಿಡುಗಡೆಗೆ ಆಗ್ರಹ

KannadaprabhaNewsNetwork | Published : Mar 4, 2025 12:32 AM

ಸಾರಾಂಶ

ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕಳೆದ 2 ತಿಂಗಳಿನಿಂದ ಕೂಲಿ ಹಣ ಜಮೆ ಆಗಿಲ್ಲ. ಈ ಸಂಬಂಧ ಅಧಿಕಾರಿಗಳು ಸಹ ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೂಲಿಕಾರರು ಅಳಲು ತೋಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕಳೆದ 2 ತಿಂಗಳಿನಿಂದ ಕೂಲಿ ಹಣ ಜಮೇ ಆಗಿಲ್ಲ. ಈ ಸಂಬಂಧ ಅಧಿಕಾರಿಗಳು ಸಹ ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೂಲಿಕಾರರು ಅಳಲು ತೋಡಿಕೊಂಡಿದ್ದಾರೆ.

ಕೇಂದ್ರ ಪುರಸ್ಕೃತ ಯೋಜನೆಯಾಗಿರುವ ನರೇಗಾದಲ್ಲಿ ನೇರವಾಗಿ ಹಣ ಜಮೆ ಮಾಡುವುದು ಸಾಮಾನ್ಯದ ಸಂಗತಿಯಾಗಿದೆ.ಆದರೆ ತಾಲೂಕಿನಲ್ಲಿ ನಡೆದಿರುವ ಕಾಮಗಾರಿಯಲ್ಲಿ ಕೆಲಸ ಮಾಡಿರುವ ಕೂಲಿ ಆಳುಗಳಿಗೆ ಎರಡು ತಿಂಗಳಿನಿಂದ ಹಣ ಜಮೇ ಆಗದೆ ಕೂಲಿಕಾರರ ಸ್ಥಿತಿ ದೇವರಿಗೆ ಪ್ರಿಯ ಎನ್ನುವಂತಾಗಿದೆ. ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ತಾಲೂಕು ಕೂಲಿಕಾರರ ಸಂಘಟನೆಯ ಮುಖ್ಯಸ್ಥೆ ಲತಾ ಗಂಗರಾಜ್‌ ಕನ್ನಮೇಡಿ, ಮಂಗಳವಾಡ, ಅರಸೀಕೆರೆ, ಬ್ಯಾಡನೂರು ಸೇರಿದಂತೆ ತಾಲೂಕಿನ ಅನೇಕ ಗ್ರಾಪಂಗಳಲ್ಲಿ 500ಕ್ಕೂ ಹೆಚ್ಚು ಮಂದಿ ಬಡ ಕೂಲಿ ಕಾರ್ಮಿಕರು ನರೇಗಾ ಯೋಜನೆ ಅಡಿಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಈ ಸಂಬಂಧ ಕೆಲಸ ನಿರ್ವಹಿಸಿದ ಬಗ್ಗೆ ಸರ್ಕಾರದ ನಿಯಮನುಸಾರ ಗ್ರಾಪಂನಿಂದ ಆನ್‌ಲೈನ್‌ ಜಿಪಿಎಸ್‌ ಸಹ ಮಾಡಲಾಗಿದೆ. ಆದರೂ ಕಳೆದ ಎರಡು ತಿಂಗಳಿಂದಲೂ ನರೇಗಾ ಯೋಜನೆ ಕಾಮಗಾರಿಯ ನಿರ್ವಹಣೆಯಲ್ಲಿ ತೊಡಗಿದ್ದ ಕೂಲಿಕಾರ್ಮಿಕರಿಗೆ ಕೂಲಿ ಹಣ ಬಿಡುಗಡೆಗೊಳಿಸಿಲ್ಲ. ಪರಿಣಾಮ ಇದನ್ನೇ ನಂಬಿ ಕೆಲಸ ನಿರ್ವಹಿಸಿದ ಗ್ರಾಮೀಣ ಕೂಲಿ ಕಾರ್ಮಿಕರು ತೀವ್ರ ಸಮಸ್ಯೆಯಲ್ಲಿ ಸಿಕ್ಕಿಕೊಂಡು ಪರದಾಡುತ್ತಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ತಾಲೂಕಿನಲ್ಲಿ ಬಹುತೇಕ ಮಂದಿ ಗ್ರಾಪಂ ನಿಂದ ಜಾಬ್‌ ಕಾರ್ಡ್‌ ಪಡೆದು ನರೇಗಾ ಯೋಜನೆಯ ಕಾಮಗಾರಿಗಳ ಕೂಲಿ ಕೆಲಸದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ನರೇಗಾ ಕೂಲಿಕಾರರ ಸಂಘದ ಮುಖ್ಯಸ್ಥರಾದ ಮಂಗಳವಾಡ ಗೀತಮ್ಮ, ಅಂಬಿಕಾ, ಸೌಂದರ್ಯ ಕರಿಯಮ್ಮ, ಬೆಟ್ಟದ ತಿಮ್ಮಪ್ಪ, ವಸಂತಮ್ಮ, ಮದ್ದೆ ಗ್ರಾಮದ ಶಿವಮೂರ್ತಿ, ಕರೆಕ್ಯಾತನಹಳ್ಳಿಯ ಸ್ವಾರಣ್ಣ, ಉಲ್ಲೇಗೌಡ ಹಾಗೂ ಇತರೆ ನೂರಾರು ಮಂದಿ ಗ್ರಾಮೀಣ ಕೂಲಿಕಾರರಿದ್ದರು.

Share this article