ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು, ಖಾಲಿಯಾದ ರಾಜ್ಯದ ಖಜಾನೆ ಭರ್ತಿ ಮಾಡಿಕೊಳ್ಳಲು ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ನೆಪದಲ್ಲಿ ರಾಜ್ಯ ಸರ್ಕಾರ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

- ಎಸ್‌ಎಸ್‌ ಕ್ರಿಯಾ ಸಮಾಧಿಗೆ ಪುಷ್ಪನಮನ ಅರ್ಪಿಸಿ ಕೇಂದ್ರ ಸಚಿವ ಎಚ್‌ಡಿಕೆ ಕಿಡಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು, ಖಾಲಿಯಾದ ರಾಜ್ಯದ ಖಜಾನೆ ಭರ್ತಿ ಮಾಡಿಕೊಳ್ಳಲು ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ನೆಪದಲ್ಲಿ ರಾಜ್ಯ ಸರ್ಕಾರ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಕ್ರಿಯಾ ಸಮಾಧಿಗೆ ಪುಷ್ಪನಮನ ಅರ್ಪಿಸಿದ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯದಂಗಡಿಗಳಿಗೆ ಪರವಾನಗಿ ನೆಪದಲ್ಲಿ ಕೋಟಿಗಟ್ಟಲೇ ಸುಲಿಗೆ ಮಾಡುತ್ತಿದ್ದು, ಅಭಿವೃದ್ಧಿಗೆ ಹಣವಿಲ್ಲದೇ, ರಾಜ್ಯದ ಖಜಾನೆಯೇ ಖಾಲಿಯಾಗಿದೆ ಎಂದರು.

ಮದ್ಯದಂಗಡಿ ಪರವಾನಿಗೆಯೊಂದಕ್ಕೆ 1.95 ಕೋಟಿ ದರ ನಿಗದಿಪಡಿಸಿದೆ. ಇದನ್ನು ಲೂಟಿಯೆನ್ನದೇ ಬೇರೆ ಏನನ್ನಲು ಸಾಧ್ಯ? ಜನರಿಗೆ ದೊಡ್ಡ ಪ್ರಮಾಣದಲ್ಲಿ ಕುಡಿತದ ಚಟಕ್ಕೆ ಹತ್ತಿಸಲು ಸರ್ಕಾರವೇ ಉತ್ತೇಜನ ನೀಡುತ್ತಿದೆ. ಪ್ರತಿಯೊಂದು ಇಲಾಖೆಯಲ್ಲಿಯೂ ಲೂಟಿ ಮಾಡಲಾಗುತ್ತಿದೆ. ಅಷ್ಟರಮಟ್ಟಿಗೆ ರಾಜ್ಯದ ಖಜಾನೆ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ದೂರಿದರು.

ಪರಿಶಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ), ಪರಿಶಿಷ್ಟ ಪಂಗಡ ಉಪ ಯೋಜನೆ (ಟಿಎಸ್‌ಪಿ) ಸೇರಿದಂತೆ ವಿವಿಧ ಯೋಜನೆಗಳಡಿ ಹಣ, ಅನುದಾನವನ್ನು ರಾಜ್ಯ ಸರ್ಕಾರವನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಖಜಾನೆಯನ್ನೇ ಕೊಳ್ಳೆ ಹೊಡೆಯಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಮಹಿಳೆಯರ ಖಾತೆಗೆ ಜಮಾ ಆಗಬೇಕಿದ್ದ ₹5 ಸಾವಿರ ಕೋಟಿ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಐದು ಸಾವಿರ ಕೋಟಿ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು, ಏನಾಯಿತೆಂಬ ಬಗ್ಗೆ ಆರ್ಥಿಕ ಸಚಿವರೂ ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೆ ಜನರಿಗೆ ಮಾಹಿತಿ ನೀಡಿಲ್ಲ. ನನಗೆ ಈ ವಿಷಯವೇ ಗೊತ್ತಿಲ್ಲವೆಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ, ದಾಖಲೆಯ ಬಜೆಟ್ ಮಂಡಿಸಿದವರಿಗೆ ತಮ್ಮದೇ ಇಲಾಖೆಯಲ್ಲಿ ಏನಾಗಿದೆಯೆಂಬ ಮಾಹಿತಿಯೇ ಇಲ್ಲ. ಅತೀ ಹೆಚ್ಚು ಸಲ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಸಿದ್ದರಾಮಯ್ಯನಂತಹ ಆರ್ಥಿಕ ತಜ್ಞರನ್ನು ಪ್ರಪಂಚದಲ್ಲೇ ಕಾಣಲು ಸಾಧ್ಯವಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಅನಂತರ ಶ್ರೀ ಕಲ್ಲೇಶ್ವರ ಮಿಲ್‌ನಲ್ಲಿ ದಕ್ಷಿಣ ಶಾಸಕರಾಗಿದ್ದ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಕ್ರಿಯಾ ಸಮಾಧಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪುಷ್ಪನಮನ ಅರ್ಪಿಸಿ, ಶಾಮನೂರು ನಿವಾಸಕ್ಕೆ ತೆರಳಿ ಎಸ್ಸೆಸ್ ಪುತ್ರರು, ಪುತ್ರಿಯರು, ಸೊಸೆಯಂದಿರು, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಅಲ್ಲಿಂದ ನಗರದ ಪಿಜೆ ಬಡಾವಣೆಯಲ್ಲಿ ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ ನಿವಾಸಕ್ಕೆ ತೆರಳಿದರು.

ಮಾಜಿ ಸಚಿವ ಸಾ.ರಾ.ಮಹೇಶ, ವಿಧಾನ ಪರಿಷತ್ತು ಸದಸ್ಯ ಎಸ್.ಎಲ್. ಬೋಜೇಗೌಡ, ವಿಧಾನ ಪರಿಷತ್ತು ಮಾಜಿ ಸದಸ್ಯ ಎಚ್.ಎಂ. ರಮೇಶಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಜೆ.ಅಮಾನುಲ್ಲಾ ಖಾನ್, ಗಣೇಶ ಟಿ.ದಾಸಕರಿಯಪ್ಪ ಮುಂತಾದವರು ಇದ್ದರು.

- - -