ಕನ್ನಡಪ್ರಭ ವಾರ್ತೆ ಶಿವಮೊಗ್ಗ/ ಶಿಕಾರಿಪುರ
ಪಟ್ಟಣದ ಹೊರವಲಯ ಅಂಬಾರಗೊಪ್ಪ ಕ್ರಾಸ್ (ಕುಟ್ರಳ್ಳಿ) ಬಳಿ ನಿರ್ಮಾಣವಾದ ಟೋಲ್ ಗೇಟ್ ನಿತ್ಯ ಶಿರಾಳಕೊಪ್ಪ ಸಹಿತ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಧಾವಿಸುವ ಸಹಸ್ರಾರು ರೈತರು, ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದ್ದು, ಅವೈಜ್ಞಾನಿಕವಾದ ಟೋಲ್ಗೇಟ್ ತೆರವುಗೊಳಿಸುವಂತೆ ಕಳೆದ ಹಲವು ದಿನದಿಂದ ರೈತರು ಜನಸಾಮಾನ್ಯರ ಆಗ್ರಹ ಇದೀಗ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ತೆರವುಗೊಳಿಸುವ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸುವಂತೆ ಆಗ್ರಹಿಸಿ ರಸ್ತೆಯಲ್ಲಿಯೇ ಧರಣಿ ಕುಳಿತರು.
ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ನೂರಾರು ರೈತರು, ರೈತ ಮುಖಂಡರು ಪಾಲ್ಗೊಂಡಿದ್ದ ಹೋರಾಟದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಶಿವಮೊಗ್ಗ-ಶಿಕಾರಿಪುರ -ಹಾನಗಲ್ ರಾಜ್ಯ ಹೆದ್ದಾರಿ 57ರಲ್ಲಿನ ತಾಲೂಕಿನ ಕುಟ್ರಳ್ಳಿ ಸಮೀಪದ ಸುಂಕ ವಸೂಲಾತಿ ಕೇಂದ್ರವನ್ನು ಸರ್ಕಾರವು ಈ ಕೂಡಲೇ ರದ್ದುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರ ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೆ, ಪ್ರತಿ ಸುಂಕ ವಸೂಲಿ ಕೇಂದ್ರ ದಿಂದ ಮತ್ತೊಂದು ಸುಂಕ ವಸೂಲಾತಿ ಕೇಂದ್ರಕ್ಕೆ ಕನಿಷ್ಠ 60 ಕಿಲೋ ಮೀಟರ್ ಅಂತರವಿರುವುದು ಸರ್ಕಾರದ ನಿಯಮವಾಗಿದೆ, ಸವಳಂಗ ಸಮೀಪದ ಸುಂಕ ವಸೂಲಿ ಕೇಂದ್ರದಿಂದ ಕುಟ್ರಳ್ಳಿ ಸಮೀಪವಿರುವ ಸುಂಕ ವಸೂಲಿ ಕೇಂದ್ರಕ್ಕೆ ಕೇವಲ 35 ಕಿಲೋ ಮೀಟರ್ ಅಂತರವಿದೆ. ಈ ಸರ್ಕಾರ ಎಲ್ಲ ನೀತಿ, ನಿಯಮವನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಸುಂಕ ವಸೂಲಿ ಕೇಂದ್ರ ನಿರ್ಮಿಸಿ ಹಣ ಲೂಟಿಗೆ ಸಂಚು ರೂಪಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪರಿಸ್ಥಿತಿಯ ತೀವ್ರತೆಯನ್ನು ಅರಿತ ಉಪ ವಿಭಾಗಾಧಿಕಾರಿ ಯತೀಶ್ ಧಾವಿಸಿ ಸುಂಕ ವಸೂಲಾತಿ ಕೇಂದ್ರದ ಬಗ್ಗೆ ಈಗಾಗಲೇ ಸಂಸದರು ಹಾಗೂ ಶಾಸಕರು ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ತೆರವುಗೊಳಿಸಲು ಆಗ್ರಹಿಸಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಂಸದರು ಶಾಸಕರ ಸಭೆ ಆಯೋಜಿಸಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಅಲ್ಲಿಯವರೆಗೆ ರೈತರು ಜನತೆ ವಾಹನ ಮಾಲೀಕರು ಸಮಾಧಾನ ಶಾಂತ ರೀತಿಯಿಂದ ವರ್ತಿಸುವಂತೆ ಮನವಿ ಮಾಡಿದರು.
ಶಿಕಾರಿಪುರ ಮಾರ್ಗವಾಗಿ ಹಾದುಹೋಗಿರುವ 57ನೇ ರಾಜ್ಯ ಹೆದ್ದಾರಿಯಾದ ಶಿವಮೊಗ್ಗ-ಹಾನಗಲ್ ನಡುವೆ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಟೋಲ್‍ನ್ನು ಕೂಡಲೇ ತೆಗೆದು ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.2013ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಅಡಿಯಲ್ಲಿ ಟೋಲ್ ನಿರ್ಮಾಣ ಮಾಡಲು ಹಲವು ನಿಬಂಧನೆಗಳನ್ನು ವಿಧಿಸಿದೆ. ರಾಜ್ಯ ಸರ್ಕಾರ ಹೀಗೆ ಟೋಲ್ ಗೇಟ್‍ನ್ನು ನಿರ್ಮಿಸುವಾಗ ನಿಯಮಗಳನ್ನು ಅನುಸರಿಸಲೇಬೇಕು. ಆದರೆ, ನಿಯಮಕ್ಕೆ ವಿರುದ್ಧವಾಗಿ ಈ ಗೇಟ್‍ಗಳನ್ನು ಅವಳಡಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.