ರಾಣಿಬೆನ್ನೂರು: ತಾಲೂಕು ಹುಲಿಕಟ್ಟಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಹಾಗೂ ಚರಂಡಿ ಸ್ವಚ್ಛತೆಗೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಮೂರು ತಿಂಗಳು ಗತಿಸಿದರೂ ನದಿಹರಳಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅದನ್ನು ಸರಿಪಡಿಸುತ್ತಿಲ್ಲ. ಇದರ ಬಗ್ಗೆ ಈ ಹಿಂದೆ ಜನತಾ ದರ್ಶನದಲ್ಲಿ ಜಿಲ್ಲಾ ಅಧಿಕಾರಿಗಳಿಗೂ ಹಾಗೂ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವದೇ ರೀತಿ ಕ್ರಮ ತೆಗೆದುಕೊಂಡಿಲ್ಲ. ಗ್ರಾಮಸ್ಥರು ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ನಾವು ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ನಮ್ಮ ಗ್ರಾಪಂ ವ್ಯಾಪ್ತಿಗೆ ತೆಗೆದುಕೊಂಡಿಲ್ಲ. ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ಕಚೇರಿ ಎಂಜಿನಿಯರ್ ರಾಮಕೃಷ್ಣ ಅವರನ್ನು ಕೇಳಿ ಎನ್ನುತ್ತಾರೆ. ಅವರನ್ನು ವಿಚಾರಿಸಿದರೆ ನಾವು ಗ್ರಾಪಂ ಸುಪರ್ದಿಗೆ ವಹಿಸಿ ಆರು ತಿಂಗಳಾಯಿತು ಎಂದು ತಿಳಿಸುತ್ತಾರೆ. ಹೀಗಾಗಿ ಗ್ರಾಮದ ಜನರು ಶುದ್ಧ ಕುಡಿಯುವ ನೀರು ಪಡೆಯಲು ಪರದಾಡುವಂತಾಗಿದೆ. ಅಶುದ್ಧ ನೀರನ್ನು ಕುಡಿದು ಗ್ರಾಮದಲ್ಲಿ ಎರಡು ತಿಂಗಳಿನಲ್ಲಿ ಸುಮಾರು 8 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.ಆದ್ದರಿಂದ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಪಂ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಇದಲ್ಲದೆ ಗ್ರಾಮದಲ್ಲಿನ ಚರಂಡಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ನೊಣಗಳು, ಇಪ್ಪಿ ಹುಳುಗಳು ಹಾಗೂ ಕ್ರಿಮಿ-ಕೀಟಗಳು ಹೆಚ್ಚಾಗಿ ಗ್ರಾಮದ ಜನರ ಆರೋಗ್ಯ ಹದಗೆಡುತ್ತಿದೆ. ಅದಕ್ಕಾಗಿ ಆದಷ್ಟು ಶೀಘ್ರ ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಸವರಾಜ ಪೂಜಾರ, ಫಕ್ಕೀರಪ್ಪ ಮಸಲಾಡದ, ಕೆಂಚಪ್ಪ ಕೋಲಕಾರ, ರೇವಣ್ಣೆಪ್ಪ ಗಡ್ಡದವರ, ಹನುಮಂತಪ್ಪ ಮಡಿವಾಳರ, ನಾಗರಾಜ ಮುದುಕನಗೌಡ್ರು, ರವಿ ಬಣಕಾರ, ರಾಜಪ್ಪ ಹೊಳಲು ಪ್ರತಿಭಟನೆಯಲ್ಲಿದ್ದರು.