ಹದಗೆಟ್ಟ ಮುಳಗುಂದ- ನೀಲಗುಂದ ರಸ್ತೆ ದುರಸ್ತಿಗೆ ಆಗ್ರಹ

KannadaprabhaNewsNetwork |  
Published : Jan 11, 2026, 03:00 AM IST
ಮುಳಗುಂದ, ನೀಲಗುಂದ ನಡುವಿನ ರಸ್ತೆ ಹಾಳಾಗಿದೆ. | Kannada Prabha

ಸಾರಾಂಶ

ಮುಳಗುಂದ ಪಟ್ಟಣದಿಂದ ನೀಲಗುಂದ ಗ್ರಾಮಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.

ಮುಳಗುಂದ: ಪಟ್ಟಣದಿಂದ ನೀಲಗುಂದ ಗ್ರಾಮಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಿ 7 ವರ್ಷ ಕಳೆದಿವೆ. ಹಲವು ದಿನಗಳಿಂದ ರಸ್ತೆ ಹಾಳಾಗಿದೆ. ಆದರೆ ಈ ವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ.

ರಸ್ತೆ ಉದ್ದಕ್ಕೂ ಡಾಂಬರ್ ಕಿತ್ತು ಗುಂಡಿಗಳು ಬಿದ್ದಿವೆ. ಕೆಲವು ಭಾಗದಲ್ಲಿ ಮೆಟ್ಲಿಂಗ್ ಹಾಳಾಗಿ ಕಲ್ಲುಗಳು ರಸ್ತೆ ತುಂಬ ಹರಡಿವೆ. ಈ ರಸ್ತೆಯ ಮಧ್ಯೆ ಹಳ್ಳದ ಹತ್ತಿರ ಅಪಾಯ ಮಟ್ಟದ ತಿರುವಿನಲ್ಲಿ ಸುರಕ್ಷಾ ಗೋಡೆ ನಿರ್ಮಿಸದೇ ಇರುವುದರಿಂದ ಹಲವು ವಾಹನ, ಬೈಕ್ ಸವಾರರು ಗುಂಡಿಗೆ ಬಿದ್ದು ಅಪಘಾತಗಳು ಸಂಭವಿಸಿವೆ.

ಕೆಲವು ಭಾಗದಲ್ಲಿ ಇಕ್ಕಟಾದ ರಸ್ತೆ ಇದ್ದು, ಇನ್ನಷ್ಟು ವಿಸ್ತರಿಸಿ ರಸ್ತೆ ನಿರ್ಮಿಸಬೇಕಿದೆ. ಚಿಂಚಲಿ ಮತ್ತು ಮುಳಗುಂದ ಮುಖ್ಯ ರಸ್ತೆಯಿಂದ ನೀಲಗುಂದ ಗ್ರಾಮದ ವರೆಗೆ ಸುಮಾರು ೫ ಕಿಮೀ ರಸ್ತೆ ಹಾಳಾಗಿ ಸಾಕಷ್ಟು ಪ್ರಮಾಣದಲ್ಲಿ ಕಡಿ ಕಿತ್ತು ಹರಡಿಕೊಂಡಿದೆ. ಬಹುತೇಕ ರೈತರು ಬಳಸುವ ರಸ್ತೆ ಇದಾಗಿದೆ.

ಕಡಿ ಕಿತ್ತಿದ್ದರಿಂದ ಎತ್ತು ಚಕ್ಕಡಿ ಸಂಚಾರಕ್ಕೆ ತೊಂದರೆ ಆಗುತ್ತಿದೆ. ರಸ್ತೆ ದುರಸ್ತಿ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈವರೆಗೂ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ. ಇತ್ತೀಚೆಗೆ ಗುಂಡಿ ಮುಚ್ಚುವ ಕೆಲಸವು ಕೂಡಾ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ ಎಂದು ಗ್ರಾಪಂ ಸದಸ್ಯ ವಿನಯ್ ಬಂಗಾರಿ ಆರೋಪಿಸಿದರು. ನೀಲಗುಂದ ಗ್ರಾಮಸ್ಥರಿಗೆ ನಿತ್ಯದ ಕೆಲಸ, ವಾಣಿಜ್ಯ ಉದ್ದೇಶಕ್ಕಾಗಿ ಮುಳಗುಂದಕ್ಕೆ ಬರಲು ನೇರ ಸಂಪರ್ಕಕೊಂಡಿಯಂತೆ ಇದ್ದ ರಸ್ತೆ ತೀರಾ ಹಾಳಾಗಿದೆ. ವಾಹನ ಸಂಚಾರಕ್ಕೆ ಯೋಗ್ಯವಿಲ್ಲದ ಕಾರಣ ಚಿಂಚಲಿ ಮೂಲಕ 12 ಕಿಮೀ ಸುತ್ತಿ ಮುಳಗುಂದಕ್ಕೆ ಬರುವ ಸ್ಥಿತಿ ಇದೆ. ಕೂಡಲೆ ರಸ್ತೆ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಸ್ತೆ ಸಂಪೂರ್ಣ ಹಾಳಾಗಿದ್ದು, ಅಷ್ಟು ಪಾಟ್ ವಾಲ್ ಮುಚ್ಚಲು ಸಾಧ್ಯವಿಲ್ಲ. ಮುಖ್ಯ ಇರುವ ಕಡೆ ಗುಂಡಿ ಮುಚ್ಚಲಾಗಿದೆ. ಹೊಸದಾಗಿ ಡಾಂಬರ್ ರಸ್ತೆ ಅಭಿವೃದ್ದಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಮಂಜೂರಾದ ನಂತರ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪಿಡಬ್ಲ್ಯುಡಿ ಕಿರಿಯ ಸಹಾಯಕ ಎಂಜಿನಿಯರ್ ಕಿರಣ ಕೆ. ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ ಜಾತ್ರೆಗೆ ರಾಜ್ಯದಿಂದ 25 ಸಾವಿರ ಭಕ್ತರು
ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಲಿ: ಸಮ್ಮೇಳನಾಧ್ಯಕ್ಷ ಸುರೇಶ್ ಸಂಸ್ಕೃತಿ