ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಾತಿ ನೀಡಲು ಆಗ್ರಹ

KannadaprabhaNewsNetwork |  
Published : Dec 13, 2024, 12:46 AM IST
12ಕೆಕೆಆರ್1:ಕುಕನೂರು ತಾಲೂಕಿನ ತಳಕಲ್ಲ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಕುಕನೂರು, ಯಲಬುರ್ಗಾ ತಾಲೂಕಿನ  ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವದರು  ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ತಳಕಲ್ಲ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಕುಕನೂರು, ಯಲಬುರ್ಗಾ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರು ಪ್ರತಿಭಟನೆ ನಡೆಸಿದರು.

ತಳಕಲ್ಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪಂಚಮಸಾಲಿ ಸಮಾಜದವರಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ತಳಕಲ್ಲ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಕುಕನೂರು, ಯಲಬುರ್ಗಾ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರು ಪ್ರತಿಭಟನೆ ನಡೆಸಿದರು. ನೂರಾರು ವಾಹನಗಳ ತಾಸೊತ್ತಿಗೂ ಹೆಚ್ಚು ಕಾಲ ರಸ್ತೆಯಲ್ಲಿಯೇ ನಿಂತಿದ್ದವು. ನಂತರ ತಹಸೀಲ್ದಾರ ಅವರಿಗೆ ಮೀಸಲಾತಿ ಜಾರಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಭಾವಚಿತ್ರ ಅಂಟಿಸಿರುವ ಪ್ರತಿಕೃತಿ ದಹಿಸಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಬಸಲಿಂಗಪ್ಪ ಭೂತೆ ಮಾತನಾಡಿ, ಪಂಚಮಸಾಲಿ ಸಮಾಜದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಾತಿ ನೀಡಬೇಕು. ಕಳೆದ 30 ವರ್ಷದಿಂದ ಮೀಸಲಾತಿಗಾಗಿ ನಮ್ಮ ಸಮಾಜ ಧ್ವನಿ ಎತ್ತುತ್ತಾ ಬಂದಿದೆ. ಆದರೆ ಇದುವರೆಗೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮೂಗಿಗೆ ತುಪ್ಪ ಸವರುವ ಕಾರ್ಯ ಆಗುತ್ತಿದೆ. ನಾನಾ ಸಮಾಜಕ್ಕೆ ಮೀಸಲಾತಿ ನೀಡಿದ ಉದಾಹರಣೆಗಳಿವೆ. ಸಿದ್ದರಾಮಯ್ಯ ಸಹ ತಮ್ಮ ಸಮಾಜದ ಮೀಸಲಾತಿಗಾಗಿ ಸ್ವಯಂ ಪ್ರೇರಿತವಾಗಿ ಧ್ವನಿ ಎತ್ತಿದ್ದರು. ಆದರೆ ಪಂಚಮಸಾಲಿ ಸಮಾಜ 30 ವರ್ಷದಿಂದ ಮೀಸಲಾತಿ ಹೋರಾಟ ಮಾಡುತ್ತಾ ಬಂದಿದ್ದರೂ ಕಡೆಗಣನೆ ಮಾಡುವ ತಂತ್ರಗಾರಿಕೆ ಎದ್ದು ಕಾಣುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ ಮಾತನಾಡಿ, ರಾಜ್ಯದಲ್ಲಿ ಲಿಂಗಾಯತರನ್ನು ಹತ್ತಿಕ್ಕುವ ಕಾರ್ಯ ಆಗುತ್ತಿದೆ. ಬೆಳಗಾವಿಯಲ್ಲಿ ಸಮಾಜದವರ ಮೇಲೆ ಲಾಠಿ ಪ್ರಹಾರ ಮಾಡಿರುವುದು ಲಿಂಗಾಯತರನ್ನು ಹತ್ತಿಕ್ಕುವ ಯತ್ನವಾಗಿದೆ. ಕಾನೂನಾತ್ಮಕ ಹೋರಾಟಕ್ಕೆ ಸರ್ಕಾರವೇ ಧಕ್ಕೆ ತಂದಿತು. ಮನವಿ ಆಲಿಸಲು ಸಿಎಂ ಸಿದ್ದರಾಮಯ್ಯ ಅವರು ಬರಲೇ ಇಲ್ಲ. ಸಚಿವರನ್ನು ಕಳಿಸಿದರು. ಅವರು ಮೀಸಲಾತಿ ಬಗ್ಗೆ ಏನೂ ಮಾತನಾಡಲೇ ಇಲ್ಲ. ನಾವು ಮನವಿ ಸಿಎಂಗೆ ಮನವಿ ಸಲ್ಲಿಸುತ್ತೇವೆ ಎಂಬ ಮಾತನ್ನಷ್ಟೇ ಆಡಿದರು. ಸಮಾಜಕ್ಕೆ 2ಎ ಮೀಸಲಾತಿ ನೀಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಾಗವುದು ಎಂದರು.

ಕುಕನೂರು ತಾಲೂಕಾಧ್ಯಕ್ಷ ವೀರಣ್ಣ ಅಣ್ಣಿಗೇರಿ ಮಾತನಾಡಿ, ಎಡಿಜಿಪಿ ಅವರು ತಮಗೆ ಲಾಠಿ ಪ್ರಹಾರ ಮಾಡಲು ಅನುಮತಿ ನೀಡಿದವರು ಯಾರು ಎಂದು ಹೇಳಬೇಕು. 2028ಕ್ಕೆ ಕಾಂಗ್ರೆಸ್ ಸರ್ಕಾರ ಧೂಳಿಪಟ ಆಗುತ್ತದೆ ಎಂದರು.

ವಕೀಲ ರಾಜು ನಿಂಗೋಜಿ, ಮುಖಂಡರಾದ ಸಿ.ಎಚ್.ಪೊಪಾ, ವೀರಣ್ಣ ಹುಬ್ಬಳ್ಳಿ ಮಾತನಾಡಿದರು.

ಪ್ರಮುಖರಾದ ಅಂದಪ್ಪ ಹುಳ್ಳಿ, ಶರಣಪ್ಪ ರಾಂಪೂರು, ಮಂಜುನಾಥ ನಾಡಗೌಡರ, ಮಹೇಶ ಮೈನಳ್ಳಿ, ವಿನಾಯಕ ಬಿನ್ನಾಳ, ಉಮೇಶಗೌಡ ಪಾಟೀಲ, ಮಲ್ಲಿಕಾರ್ಜುನ ನಾಡಗೌಡರ, ಪ್ರಭು ಹಳ್ಳಿ, ರವಿ ಮುತ್ತಾಳ, ಯಲಬುರ್ಗಾ, ಕುಕನೂರು ತಾಲೂಕಿನ ಪಂಚಮಸಾಲಿ ಸಮಾಜದವರಿದ್ದರು.ಗುಳಗಣ್ಣವರ ಬೆಂಬಲ:

ಪ್ರತಿಭಟನೆಯಲ್ಲಿ ಭಾಗಿಯಾದ ಬೆಂಬಲ ನೀಡಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಪಂಚಮಸಾಲಿ ಸಮಾಜದ ಮೇಲಿನ ಸರ್ಕಾರದ ಧೋರಣೆ ಸರಿಯಲ್ಲ. ಲಾಠಿ ಪ್ರಹಾರ ಮಾಡಬಾರದಿತ್ತು. ಸಮಾಜದವರು ಮೀಸಲಾತಿ ಕೇಳಿದ್ದರು. ಆದರೆ ಸರ್ಕಾರ ಅವರಿಗೆ ಏಟು ನೀಡಿರುವುದು ಯಾವ ಸಾರ್ಥಕತೆಗಾಗಿ. ರಾಜ್ಯದಲ್ಲಿ ಕುಕನೂರು, ಯಲಬುರ್ಗಾ ಸಮಾಜದ ಪಂಚಮಸಾಲಿಯವರು ಭದ್ರ ಬುನಾದಿ ಇದ್ದಂತೆ. ಗಟ್ಟಿತನದಿಂದ ಇಲ್ಲಿನ ಮುಖಂಡರು ಹೋರಾಟಕ್ಕೆ ಮುಂದಾಗಿದ್ದಾರೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ