ಶಿವಮೊಗ್ಗ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಸಂಬಂಧ ಮುಖ್ಯಮಂತ್ರಿ ಹಾಗೂ ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಪರಪ್ಪನ ಅಗ್ರಹಾರ ಜೈಲು ಸ್ಟಾರ್ ಹೋಟೆಲ್ ಆಗಿ, ಮನರಂಜನಾ ಕ್ಲಬ್‌ಆಗಿ ಪರಿವರ್ತನೆಗೊಂಡಿದೆ. ಭ್ರಷ್ಟಾಚಾರ, ಮಾಫಿಯಾ, ವೀಡಿಯೋ ಮತ್ತು ಮೂಲಭೂತವಾದಿಗಳಿಗೆ, ಉಗ್ರರಿಗೂ ಪರಪ್ಪನ ಅಗ್ರಹಾರ ಜೈಲು ಮನರಂಜನಾ ಕ್ಲಬ್ ಆಗಿ ಮಾರ್ಪಟ್ಟಿದ್ದು ದೇಶದ್ರೋಹಿಗಳಿಗೆ ಟಿವಿ, ಮೊಬೈಲ್, ಗುಂಡು-ತುಂಡುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದೆಲ್ಲವೂ ನಿರಂತರವಾಗಿ ಸಹಜವೆಂಬಂತೆ ನಡೆಯುತ್ತಿದ್ದು, ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆ ಮಾಡಲಾಗಿದ್ದು, ದೃಶ್ಯಮಾಧ್ಯಮಗಳಲ್ಲಿ ಮಾಹಿತಿ ಬಂದ ನಂತರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿಮಾಡಿದ್ದಾರೆ. ಸರ್ಕಾರದ ಕುಮ್ಮಕ್ಕಿಲ್ಲದೆ ಜೈಲಿನಲ್ಲಿ ಈ ರೀತಿ ವ್ಯವಸ್ಥೆಯಾಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಜೈಲಿನ ವ್ಯವಸ್ಥೆಯೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದಕ್ಕೆ ನೇರವಾಗಿ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರೇ ಹೊಣೆಗಾರರಾಗಿದ್ದು ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಬಿಜೆಪಿ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಪ್ರಧಾನ ಕಾರ್ಯದರ್ಶಿ ಆರ್.ವಿ.ದರ್ಶನ್ , ಅರುಣ್ ಕುಗ್ವೆ, ನಗರ ಅಧ್ಯಕ್ಷ ರಾಹುಲ್ ಬಿದಿರೆ, ಸುರೇಖಾ ಮುರುಳೀಧರ್, ಪ್ರಮುಖರಾದ ಮಾಲತೇಶ್, ಹರಿಕೃಷ್ಣ, ನಾಗರಾಜ್, ಕೆ.ವಿ.ಅಣ್ಣಪ್ಪ, ಮಂಗಳಾ ನಾಗೇಂದ್ರ, ರಶ್ಮೀ ಶ್ರೀನಿವಾಸ್, ಚೈತ್ರಾ ಪೈ ಇತರರಿದ್ದರು.