ಕೊಡವರಿಗೆ ಪ್ರತ್ಯೇಕ ಲೋಕಸಭೆ, ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ

KannadaprabhaNewsNetwork |  
Published : May 04, 2026, 02:45 AM IST
ಚಿತ್ರ : 3ಎಂಡಿಕೆ1 : ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಭಿಯಾನವನ್ನು ಆರಂಭಿಸಿತು.  | Kannada Prabha

ಸಾರಾಂಶ

ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಭಾನುವಾರ ಅಭಿಯಾನವನ್ನು ಆರಂಭಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಭಾನುವಾರ ಅಭಿಯಾನವನ್ನು ಆರಂಭಿಸಿತು.

ಪ್ರಾಚೀನ ಕೊಡವ ಸಾಂಪ್ರದಾಯಿಕ ಆವಾಸಸ್ಥಾನದ ಪ್ರಾದೇಶಿಕ ಮಿತಿಯೊಳಗೆ ಪ್ರತ್ಯೇಕ ಕೊಡವ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿ ಕ್ಷೇತ್ರಗಳ ಸ್ಥಾಪನೆ, ಅಥವಾ ಪರ್ಯಾಯವಾಗಿ ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ "ಸಂಘ " ಚುನಾವಣಾ ಕ್ಷೇತ್ರದ ಮಾದರಿಯಲ್ಲಿ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರಿಗಾಗಿ ಪ್ರತ್ಯೇಕ ಅಮೂರ್ತ ಕೊಡವ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿ ಕ್ಷೇತ್ರಗಳನ್ನು ರಚಿಸುವುದು ಸೇರಿದಂತೆ ಹಲವು ಬೇಡಿಕೆ ಮುಂದಿರಿಸಲಾಗಿದೆ.ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ತಲಕಾವೇರಿಯಲ್ಲಿ ಧಾರ್ಮಿಕ ಪ್ರಾರ್ಥನೆ ಸಲ್ಲಿಸಿ ಕೊಡವರ ಸಾಂವಿಧಾನಿಕ ಉದ್ದೇಶಕ್ಕಾಗಿ ದೈವಿಕ ಆಶೀರ್ವಾದವನ್ನು ಕೋರಿದ ಸದಸ್ಯರು ಮಾನವ ಸರಪಳಿ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸಿಎನ್‌ಸಿ ಬೇಡಿಕೆಗಳ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ಮೇ 12 ರಿಂದ 48 ಗಂಟೆಗಳ ಹಗಲು-ರಾತ್ರಿ ಶಾಂತಿಯುತ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದರು.ಮುಂಬರುವ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಮಸೂದೆಯಡಿ ಕೊಡವ ಮಹಿಳೆಯರಿಗೆ ಆಂತರಿಕ ಮೀಸಲಾತಿ ಕೋಟಾ ನೀಡಬೇಕು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ‘ಕೋಡ್ ಮತ್ತು ಕಾಲಂ'''''''''''''''' ಅನ್ನು ನಿಗದಿಪಡಿಸಬೇಕು. ಕೊಡವರಿಗೆ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರ ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಭಾರತದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ಭಾರತದ ಮುಖ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿ ಕೊಡಲಾಗಿದೆ ಎಂದರು.ಎನ್‌ಡಿಎ ಸರ್ಕಾರ ರಾಜ್ಯಸಭಾ ಪ್ರಾತಿನಿಧ್ಯ ಸೇರಿದಂತೆ 1200 ಕ್ಕೂ ಹೆಚ್ಚು ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸಲು ಹೊಸ ಸಂಸತ್ತು ಅಂದರೆ ಸೆಂಟ್ರಲ್ ವಿಸ್ಟಾವನ್ನು ನಿರ್ಮಿಸಿದೆ. ಲೋಕಸಭೆಯಲ್ಲಿ 850 ಸದಸ್ಯರನ್ನು ಹೊಂದಲಿದೆ. ಸರಕಾರ ಜನಸಂಖ್ಯೆಯನ್ನು ಮಾತ್ರ ಮಾನದಂಡವಾಗಿ ಪರಿಗಣಿಸಬಾರದು. ಕ್ಷೇತ್ರ ಮರುವಿಂಗಡಣೆಗೆ ಅಗತ್ಯವಿರುವ ಜನಸಂಖ್ಯೆಯ ಆಧಾರದಲ್ಲಿ ನಾವು ಸ್ಪರ್ಧಿಸಲು ಸಾಧ್ಯವಿಲ್ಲ. ವಿಲೀನದ ನಂತರ, ಕೊಡವ ಭೂಪ್ರದೇಶದಲ್ಲಿ ರಾಜ್ಯ ಪ್ರಾಯೋಜಿತ ಜನಸಂಖ್ಯಾ ಬದಲಾವಣೆಗಳು, ಕೊಡವರ ಜನಸಂಖ್ಯಾ ಕುಸಿತ ಮತ್ತು ಹೊರಗಿನವರ ಪುನರ್ವಸತಿ ನಡೆದಿರುವುದು ಆತಂಕಕಾರಿ ವಿಷಯವಾಗಿದೆ. ಬಹುಸಂಖ್ಯಾತ ಸಮುದಾಯದ ನಡುವೆ ಕೊಡವರು ಆಯ್ಕೆಯಾಗಲು ಸಾಧ್ಯವಿಲ್ಲ. ಒಂದು ವೇಳೆ ಆಯ್ಕೆಯಾದರೂ, ನಾವು ನಮ್ಮ ಸ್ವಾಭಿಮಾನದ ಧ್ವನಿಯನ್ನು ಎತ್ತಲು ಸಾಧ್ಯವಿಲ್ಲ ಮತ್ತು ಇತರರ ಇಚ್ಛೆಯಂತೆ ನಡೆಯಬೇಕಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬೊಟ್ಟಂಗಡ ಸವಿತಾ ಗಿರೀಶ್, ಅಪ್ಪಾರಂಡ ನಂದಿನಿ ನಂಜಪ್ಪ, ಅರೆಯಡ ಸವಿತಾ ತಿಮ್ಮಯ್ಯ, ಅಪ್ಪಾರಂಡ ನೀರು ಸೋಮಕ್ಕ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಪಟ್ಟಮಾಡ ಕುಶ, ನಂದೇಟಿರ ರವಿ ಸುಬ್ಬಯ್ಯ, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗಾಲದ ಮೊದಲು ಸೇತುವೆ ಕಾಮಗಾರಿ ಪೂರ್ಣವಾಗದಿದ್ದರೆ ಸಂಚಾರಕ್ಕೆ ಸಂಚಕಾರ
ಉದ್ಯಮ- ತಂತ್ರಜ್ಞಾನ ಬೆಳವಣಿಗೆಯ ಕೇಂದ್ರವಾಗಿ ಮಂಗಳೂರು