ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರಮಾಣಪತ್ರಗಳು, ಚಿನ್ನದ ಪದಕಗಳು ಹಾಗೂ ಗೌರವ ಡಾಕ್ಟರೇಟ್‌ಗಳನ್ನು ಪ್ರದಾನ ಮಾಡಿದರು.

7 ಗಣ್ಯರಿಗೆ ಗೌರವ ಡಾಕ್ಟರೇಟ್, ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶದಲ್ಲೇ ಮೊದಲ ಬಾರಿಗೆ 138 ರೈತರಿಗೆ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ತರಬೇತಿ ಪ್ರಮಾಣಪತ್ರ ಪ್ರದಾನ ಮಾಡುವ ಮೂಲಕ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ (ಎಸ್‌ಎಸ್‌ಎಸ್‌ಯುಎಚ್‌ಇ) 5ನೇ ಘಟಿಕೋತ್ಸವ ವಿಶಿಷ್ಟ ಮೈಲಿಗಲ್ಲು ದಾಖಲಿಸಿತು.

ಇದೇ ವೇಳೆ ವಿವಿಧ ವಿಭಾಗಗಳ 119 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದ್ದು, 14 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಗ್ರಾಮದ ಪ್ರೇಮಾಮೃತಂ ಸಭಾಂಗಣದಲ್ಲಿ ಬುಧವಾರ ನಡೆದ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಸದ್ಗುರು ಶ್ರೀ ಮಧುಸೂದನ ಸಾಯಿ ಸಾನ್ನಿಧ್ಯ ವಹಿಸಿದರು. ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರಮಾಣಪತ್ರಗಳು, ಚಿನ್ನದ ಪದಕಗಳು ಹಾಗೂ ಗೌರವ ಡಾಕ್ಟರೇಟ್‌ಗಳನ್ನು ಪ್ರದಾನ ಮಾಡಿದರು.

ದೇಶದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರು, ತುಮಕೂರು (ತಿಪಟೂರು) ಹಾಗೂ ಹಾಸನ (ಅರಸೀಕೆರೆ) ಭಾಗಗಳ 138 ರೈತರಿಗೆ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ತರಬೇತಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪದ್ಮವಿಭೂಷಣ ಪುರಸ್ಕೃತ ವಿಜ್ಞಾನಿ ಡಾ. ಆರ್.ಎ. ಮಶೇಲ್ಕರ್, ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್, ತಾಳಯೋಗಿ ಪಂಡಿತ್ ಸುರೇಶ್ ತಳವಳ್ಕರ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಸಲಹೆಗಾರ ಡಾ. ಜಿ.ವಿ. ಸಿಂಗ್ ಅವರಿಗೆ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಭಾರತರತ್ನ ಪ್ರೊ. ಸಿ.ಎನ್. ರಾವ್, ಆರೋಗ್ಯ ಕ್ಷೇತ್ರದ ಡಾ. ಸೌಮ್ಯ ಸ್ವಾಮಿನಾಥನ್ ಹಾಗೂ ಶಿಕ್ಷಣ ಕ್ಷೇತ್ರದ ಡಾ. ಇಂದುಮತಿ ರಾವ್ ಅವರಿಗೆ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಘೋಷಿಸಲಾಯಿತು.

ಆಶೀರ್ವಚನ ನೀಡಿದ ಸದ್ಗುರು ಮಧುಸೂದನ ಸಾಯಿ, ಪರಂಪರಾಗತ ಕೃಷಿ ಜ್ಞಾನಕ್ಕೆ ಇದುವರೆಗೆ ಶೈಕ್ಷಣಿಕ ವಲಯದಲ್ಲಿ ಸೂಕ್ತ ಮನ್ನಣೆ ದೊರಕುತ್ತಿರಲಿಲ್ಲ. ಆ ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ ದೇಶದಲ್ಲೇ ಮೊದಲ ಬಾರಿಗೆ ವಿಶ್ವವಿದ್ಯಾಲಯದ ಮೂಲಕ ರೈತರ ಜ್ಞಾನ ಮತ್ತು ಅನುಭವಕ್ಕೆ ಮನ್ನಣೆ ನೀಡುವ ಪರಂಪರೆಗೆ ಚಾಲನೆ ನೀಡಿದ್ದೇವೆ. ಈ ವರ್ಷ ಚಿಕ್ಕಮಗಳೂರು, ಹಾಸನ ಹಾಗೂ ತುಮಕೂರು ಜಿಲ್ಲೆಯ 138 ರೈತರಿಗೆ ಪ್ರಮಾಣಪತ್ರ ಪ್ರದಾನ ಮಾಡಿದ್ದೇವೆ. ಮುಂದಿನ ಘಟಿಕೋತ್ಸವದ ವೇಳೆಗೆ ಕನಿಷ್ಠ 2 ಸಾವಿರ ರೈತರಿಗೆ ಪ್ರಮಾಣಪತ್ರ ನೀಡುವ ಗುರಿ ಹೊಂದಿದ್ದೇವೆ ಎಂದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭಾರತ ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದೆ. ಡಿಜಿಟಲ್ ತಂತ್ರಜ್ಞಾನ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ, ಆರೋಗ್ಯ ಹಾಗೂ ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ವಿಕಸಿತ ಭಾರತದ ನಿರ್ಮಾಣದಲ್ಲಿ ಮೌಲ್ಯಾಧಾರಿತ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶ್ರೀ ಸತ್ಯ ಸಾಯಿ ಗ್ರಾಮ ಹಾಗೂ ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.

2019ರಲ್ಲಿ ಸ್ಥಾಪನೆಯಾದ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಶಿಕ್ಷಣ, ವಸತಿ, ಆಹಾರ ಸೇರಿದಂತೆ ವಿದ್ಯಾರ್ಥಿಗಳ ಎಲ್ಲ ಅಗತ್ಯಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸುತ್ತಿದೆ. ಈ ಬಾರಿ ಪದವಿ ಪಡೆದ 119 ವಿದ್ಯಾರ್ಥಿಗಳಲ್ಲಿ ಶೇ.60ರಷ್ಟು ವಿದ್ಯಾರ್ಥಿನಿಯರು, ಶೇ.85ರಷ್ಟು ಮಂದಿ ಬಿಪಿಎಲ್ ಕುಟುಂಬಗಳ ಹಿನ್ನೆಲೆಯವರು, ಶೇ. 67ರಷ್ಟು ಮೊದಲ ತಲೆಮಾರಿನ ಪದವೀಧರರು ಹಾಗೂ ಶೇ.51ರಷ್ಟು ಮಂದಿ ಗ್ರಾಮೀಣ ಹಿನ್ನೆಲೆಯವರಾಗಿದ್ದಾರೆ.

ಸಿಕೆಬಿ- 5 ಸತ್ಯ ಸಾಯಿ ಗ್ರಾಮದಲ್ಲಿ ನಡೆದ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಮಾಜಿ ಭಾರತೀಯ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಅವರಿಗೆ ಸಂಸದ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು