ಕನ್ನಡಪ್ರಭ ವಾರ್ತೆ, ತುಮಕೂರುಸಮಾನತೆ, ಕಾಯಕ, ದಾಸೋಹದ ಮೇಲೆ ನಂಬಿಕೆ ಇಟ್ಟಿದ್ದ ಹಡಪದ ಅಪ್ಪಣ್ಣ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ನುಡಿದರು.ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಸಾಪ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.12 ನೇ ಶತಮಾನದ ವಚನ ಚಳವಳಿಯ ನೇತೃತ್ವ ವಹಿಸಿದ್ದ ಹಲವು ಮಹನೀಯರು ಜಯಂತಿಗಳನ್ನು ಸರಕಾರ ಆಚರಿಸುತಿದ್ದು,ಅವರಲ್ಲಿ ಬಸವಣ್ಣ ನವರ ಬಲಗೈ ಬಂಟನಂತಿದ್ದ ಶಿವಶರಣ ಹಡಪದ ಅಪ್ಪಣ್ಣ ನವರು ಒಬ್ಬರು. ಯಾರನ್ನು ಬೆಳಗ್ಗೆ ಎದ್ದು ನೋಡಬಾರದು ಎಂಬ ಮೌಢ್ಯ ಸಮಾಜದಲ್ಲಿ ತುಂಬಿತ್ತೋ, ಅದೇ ಸಮಾಜಕ್ಕೆ ಸೇರಿದ ಹಡಪದ ಅಪ್ಪಣ್ಣ ಅವರನ್ನು ತಮ್ಮ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿಕೊಂಡಿದ್ದ ಬಸವಣ್ಣ, ತನ್ನನ್ನು ನೋಡುವ ಮೊದಲು ಹಡಪದ ಅಪ್ಪಣ್ಣ ಅವರ ಬಳಿ ಹೋಗಿ, ಒಪ್ಪಿಗೆ ಪಡೆದು ಬರುವಂತಹ ನೀತಿ ರೂಪಿಸಿದ್ದರು. ಇದು ತಳ ಸಮುದಾಯಗಳಿಗೆ ಸಮಾನತೆ ಕಲ್ಪಿಸಲು ಜಗಜ್ಯೋತಿ ಬಸವೇಶ್ವರು ಕಂಡುಕೊಂಡ ಮಾರ್ಗ ಎಂದರು.12 ನೇ ಶತಮಾನದ ವಚನ ಚಳವಳಿಯ ಕಾಲದಲ್ಲಿದ್ದ ಶೂನ್ಯ ಸಿಂಹಾಸನದಲ್ಲಿ ಅಲ್ಲಮಪ್ರಭು ಸೇರಿದಂತೆ ಎಲ್ಲಾ ಸಮುದಾಯದ ಜನರಿಗೆ ಅವಕಾಶವಿತ್ತು. ನಾನು ಎಂಬ ಅಹಂ ಬಿಟ್ಟು, ಸಮಾಜದ ಏಳಿಗೆಗಾಗಿ ದುಡಿದ ಎಲ್ಲರೂ ಮಹನೀಯರೇ ಎಂಬುದು ಶೂನ್ಯ ಸಿಂಹಾಸನದ ಪ್ರಮುಖ ಉದ್ದೇಶವಾಗಿತ್ತು.ಮೌಢ್ಯತೆಯ ವಿರುದ್ದ ಹೋರಾಡುತ್ತಲೇ, ಮೌಢ್ಯವನ್ನು ಜನರ ಮನಸ್ಸಿನಿಂದ ಕಿತ್ತು ಹಾಕಲು 251 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದರು ಎಂದರು. ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ವಚನ ಚಳವಳಿಯಲ್ಲಿದ್ದ ಬಹುತೇಕರು ಕಾಯಕ ಮತ್ತು ದಾಸೋಹ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ಹಡಪದ ಅಪ್ಪಣ್ಣ ಎರಡರಲ್ಲಿಯೂ ಪ್ರಸಿದ್ದಿ ಪಡೆದಿದ್ದರು. ಅವರ ವಚನಗಳಲ್ಲಿರುವ ಪ್ರಖರತೆ, ಅವರು ಬಸಣ್ಣನವರ ಸಂದೇಹ ವಾಹಕರಾಗಿ ಮಾಡಿದ ಕೆಲಸ ಅವಿಸ್ಮರಣೀಯ. ಭಕ್ತಿಯಿಲ್ಲದ ಪೂಜೆ, ದುಡಿಮೆ ಇಲ್ಲದ ನೈವೆಧ್ಯ ಭಗವಂತನಿಗೆ ಸಲ್ಲದು ಎಂದು ಜಗತ್ತಿಗೆ ಸಾರಿ, ಡಾಂಬಿಕ ಭಕ್ತಿಯನ್ನು ಅಲ್ಲಗಳೆದವರು ಹಡಪದ ಅಪ್ಪಣ್ಣ.ಹಾಗಾಗಿಯೇ ಶಿವಶರಣರು ಕಾಯಕವೇ ಕೈಲಾಸ ಎಂದು ನಂಬಿದ್ದರು ಎಂದರುಸ್ವದೇಶಿ ವಿಶ್ವಣ್ಣ , ತುಮಕೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಕಟ್‌ವೆಲ್ ರಂಗನಾಥ್ ಮಾತನಾಡಿದರು.

ಈ ವೇಳೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಜಿಲ್ಲಾ ಸಮಿತಾ ಸಮಾಜದ ಅಧ್ಯಕ್ಷ ಮಂಜೇಶ್, ಜಿಲ್ಲಾ ವಾದ್ಯಗಾರರ ಸಂಘದ ಅಧ್ಯಕ್ಷ ಗಂಗಾಧರ್, ಸತ್ಯನಾರಾಯಣ್, ಬೆಸ್ಟೆಕ್ಸ್ ರಾಮರಾಜು, ಸೀತಾರಾಮಯ್ಯ ಸೇರಿದಂತೆ ಸಮುದಾಯದ ಮುಖಂಡರು ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.