ಒಸಿ ವಿನಾಯಿತಿಯಿಂದ ಸ್ಮಾರ್ಟ್‌ ಮೀಟರ್‌ಗೆ ಬೇಡಿಕೆ

KannadaprabhaNewsNetwork |  
Published : Jul 31, 2026, 04:00 AM ISTUpdated : Jul 31, 2026, 04:34 AM IST
BESCOM

ಸಾರಾಂಶ

ಬೆಸ್ಕಾಂ ವ್ಯಾಪ್ತಿಯಲ್ಲಿ 2400 ಚದರ ಅಡಿವರೆಗಿನ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡಿರುವುದರಿಂದ ವಿದ್ಯುತ್ ಶಾಶ್ವತ ಸಂಪರ್ಕ ಹಾಗೂ ಸ್ಮಾರ್ಟ್‌ ಮೀಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆಗೆ ತಕ್ಕಂತೆ ಮೀಟರ್‌ ಪೂರೈಕೆ ಹಾಗೂ ಅಳವಡಿಕೆ ನಡೆದಿಲ್ಲ.

 ಬೆಂಗಳೂರು :  ಬೆಸ್ಕಾಂ ವ್ಯಾಪ್ತಿಯಲ್ಲಿ 2400 ಚದರ ಅಡಿವರೆಗಿನ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡಿರುವುದರಿಂದ ವಿದ್ಯುತ್ ಶಾಶ್ವತ ಸಂಪರ್ಕ ಹಾಗೂ ಸ್ಮಾರ್ಟ್‌ ಮೀಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆಗೆ ತಕ್ಕಂತೆ ಮೀಟರ್‌ ಪೂರೈಕೆ ಹಾಗೂ ಅಳವಡಿಕೆ ನಡೆದಿಲ್ಲ.

ಇದಕ್ಕೆ ಸ್ಮಾರ್ಟ್ ಮೀಟರ್‌ ಗುತ್ತಿಗೆ ಪಡೆದಿರುವ ರಾಜಶ್ರೀ ಎಲೆಕ್ಟ್ರಿಕಲ್ಸ್ ಬಳಿ ತಾಂತ್ರಿಕ ಸಿಬ್ಬಂದಿ ಕೊರತೆ, ಸಾಫ್ಟ್‌ವೇರ್‌ ಸಮಸ್ಯೆ, ಮೀಟರ್‌ಗಳ ಅಲಭ್ಯತೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಮಾರ್ಟ್‌ ಮೀಟರ್‌ಗಳಿಗೆ ಹಣ ಪಾವತಿಸಿದ್ದರೂ ಪೂರೈಕೆ ಮಾಡುತ್ತಿಲ್ಲ. ಜತೆಗೆ ಇದಕ್ಕೆ ಅಗತ್ಯವಿರುವ ತಾಂತ್ರಿಕ ಸಿಬ್ಬಂದಿಯೂ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಬಳಿ ಇಲ್ಲ ಎಂದು ಆರೋಪಿಸಿ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರು ಇತ್ತೀಚೆಗೆ ನೆಲಮಂಗಲದ ರಾಜಶ್ರೀ ಮಾರಾಟ ಮಳಿಗೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಡಿಕೆ ಹೆಚ್ಚಳ, ಪೂರೈಕೆಗೆ ವಿಫಲ:

ಬೆಸ್ಕಾಂ ವ್ಯಾಪ್ತಿಯಲ್ಲಿ ಶೇ.20 ರಷ್ಟು ಹೆಚ್ಚುವರಿ ವ್ಯತ್ಯಾಸದೊಂದಿಗೆ 2400 ಚದರ ಅಡಿವರೆಗಿನ ಕಟ್ಟಡಗಳಿಗೆ ಓಸಿ ವಿನಾಯಿತಿ ನೀಡಲಾಗಿದೆ. ಜತೆಗೆ ವಸತಿ ಕಟ್ಟಡ ಮಾಲೀಕರು ಜು.6ರ ಒಳಗಾಗಿ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯುವಂತೆ ಬೆಸ್ಕಾಂ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಸಾವಿರಾರು ಕಟ್ಟಡ ಮಾಲೀಕರು ವಿದ್ಯುತ್ ಸಂಪರ್ಕ ಹಾಗೂ ಸ್ಮಾರ್ಟ್‌ ಮೀಟರ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರತಿ ಉಪ ವಿಭಾಗದಲ್ಲಿ ದಿನಕ್ಕೆ 100 ಅರ್ಜಿ ಬರುತ್ತಿದ್ದದ್ದು ಈಗ 400-500 ಅರ್ಜಿ ಬಂದಿದೆ. ಅವರಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಸಿ ಕಾನ್ಫಿಗರೇಷನ್‌ ಮಾಡಲು ರಾಜಶ್ರೀ ಬಳಿಕ ತಾಂತ್ರಿಕ ಸಿಬ್ಬಂದಿಯ ಕೊರತೆಯಿದೆ. ಹೀಗಾಗಿ ತೀವ್ರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಮಳಿಗೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜತೆಗೆ, ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಬರುವ ಸಿಬ್ಬಂದಿಯು ವಿದ್ಯುತ್‌ ಹೆಚ್ಚುವರಿ ಲೋಡ್‌ ಸ್ಯಾಂಕ್ಷನ್‌, ನೆರೆ-ಹೊರೆಯ ಮನೆಗಳ ವಿದ್ಯುತ್‌ ಸಂಪರ್ಕ ಕೊಡಿಸುವ ಗುತ್ತಿಗೆಯನ್ನೂ ಪಡೆಯುತ್ತಿದ್ದಾರೆ. ಅನುಮತಿ ಪಡೆದ ಗುತ್ತಿಗೆದಾರರ ಅವಕಾಶಗಳನ್ನು ಹೈಜಾಕ್‌ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಸಮಸ್ಯೆ ಆಗಿರುವುದು ನಿಜ: ಬೆಸ್ಕಾಂ

ಸಮಸ್ಯೆ ಒಪ್ಪಿಕೊಂಡಿರುವ ಬೆಸ್ಕಾಂ ಸ್ಮಾರ್ಟ್‌ ಮೀಟರಿಂಗ್‌ ಅಧಿಕಾರಿಗಳು, ಓಸಿ ವಿನಾಯಿತಿ ನೀಡಿ ಗಡುವು ವಿಧಿಸಿರುವುದರಿಂದ ಹೆಚ್ಚು ಮಂದಿ ವಿದ್ಯುತ್‌ ಸಂಪರ್ಕ ಹಾಗೂ ಮೀಟರ್‌ ಅಳವಡಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಈ ಮೊದಲು ಮೀಟರ್‌ಗಳನ್ನು ಬೆಸ್ಕಾಂ ಸಿಬ್ಬಂದಿಯೇ ಅಳವಡಿಕೆ ಮಾಡುತ್ತಿದ್ದರು. ಇದೀಗ ಸ್ಮಾರ್ಟ್‌ ಮೀಟರ್‌ ಆಗಿರುವುದರಿಂದ ಅದಕ್ಕೆ ನೆಟ್‌ವರ್ಕ್‌ ಸಿಮ್‌ ಅಳವಡಿಸಿ ಕಾನ್ಫಿಗರೇಷನ್‌ ಮಾಡಬೇಕು. ಹೀಗಾಗಿ ರಾಜಶ್ರೀ ಅವರ ತಾಂತ್ರಿಕ ಸಿಬ್ಬಂದಿಯೇ ಅಳವಡಿಕೆ ಮಾಡಬೇಕು. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ ಎಂದು ಹೇಳಿದ್ದಾರೆ.

ತಾಂತ್ರಿಕ ಸಮಸ್ಯೆ

ಇನ್ನು ರಾಜಶ್ರೀ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆಗಳಿಂದಾಗಿ ಕಾನ್ಫಿಗರೇಷನ್‌ ಹಾಗೂ ಸೇವೆಗೆ ವ್ಯತ್ಯಯ ಆಗಿದೆ. ತಾತ್ಕಾಲಿಕ ಸಂಪರ್ಕದಿಂದ ಬ್ಯಾಲೆನ್ಸ್‌ ವರ್ಗಾವಣೆಯಲ್ಲೂ ಸಮಸ್ಯೆಯಾಗಿದೆ. ಜತೆಗೆ ಗ್ರಾಹಕರು ಆಯಾ ವಿಭಾಗಗಳಲ್ಲೇ ಮೀಟರ್‌ಗೆ ಅರ್ಜಿ ಸಲ್ಲಿಸಿ ಪಡೆಯಬೇಕು ಎಂಬ ಹೊಸ ನಿಯಮ ಮಾಡಲಾಗಿದ್ದು, ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗಿದೆ ಎಂದು ಗುತ್ತಿಗೆದಾರರು ದೂರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹೆಣ್ಣು ಹುಲಿಗೆ ರೂಟ್ ಕೆನಾಲ್‌ ಚಿಕಿತ್ಸೆ
​ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ: ಅಭಿಪ್ರಾಯ ಸಂಗ್ರಹ