ಕನ್ನಡಪ್ರಭ ವಾರ್ತೆ ಹಾಸನ
ವಿಶ್ವವಿಖ್ಯಾತ ಮೈಸೂರು ದಸರಾ ಮುಗಿದ ಬೆನ್ನಲ್ಲೇ ಹೆಮ್ಮೆಯ ಹಾಸನ ನಗರದಲ್ಲಿ ಜರುಗುವ ನಗರದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೂ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಒತ್ತಾಯಿಸಿದ್ದಾರೆ.ಜೋರು ಮಳೆಯಿಂದ ರಸ್ತೆಗಳು ಹಾಳಾಗಿವೆ. ಇವುಗಳನ್ನು ದುರಸ್ತಿ ಮಾಡಬೇಕಿದೆ. ಸರ್ಕಾರಿ ಕಚೇರಿಗಳಿಗೆ ಸುಣ್ಣ ಬಣ್ಣ ಬಳಿದು ಹೊಸ ರೂಪ ನೀಡಬೇಕಿದೆ. ನಗರದ ಸೌಂದರ್ಯ ಹೆಚ್ಚಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಕನಿಷ್ಠ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ಸುಮಾರು 14 ಲಕ್ಷ ಭಕ್ತರು, ಆಗಮಿಕರು ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯದಿಂದಲೂ ಭಕ್ತಾದಿಗಳು ಆಗಮಿಸಿದ್ದರು. ಈ ಬಾರಿಯೂ ಅದು ಮರುಕಳಿಸುವ ಸಾಧ್ಯತೆ ಇದೆ. ನಗರದ ಸೌಂದರ್ಯ ಹೆಚ್ಚಳ ಜೊತೆಗೆ ಮೂಲಭೂತ ಸೌಕರ್ಯ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಅನುದಾನದ ತುರ್ತು ಅವಶ್ಯಕತೆ ಇದೆ ಎಂದಿದ್ದಾರೆ. ಈ ಹಿಂದೆ ಹಾಸನ ನಗರಸಭೆ ವ್ಯಾಪ್ತಿಗೆ ಸೇರಿರುವ 25 ಗ್ರಾಮಗಳ ಅಭಿವೃದ್ಧಿಗೂ ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹಿಂದೆ ಕುಮಾರಸ್ವಾಮಿರವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಎಚ್.ಡಿ.ರೇವಣ್ಣ ಅವರು ಸಚಿವರಾಗಿದ್ದ ಅವಧಿಯಲ್ಲಿ ಕಟ್ಟಿರುವ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜ್, ಪಶುವೈದ್ಯಕೀಯ ಕಾಲೇಜು, ಕೃಷಿ ಕಾಲೇಜು, ಹೈಟೆಕ್ ಬಸ್ ನಿಲ್ದಾಣ, ಜಿಲ್ಲಾ ನ್ಯಾಯಾಲಯ ಸಮುಚ್ಛಯ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಸುಣ್ಣ ಬಣ್ಣ ಬಳಿದು ಹತ್ತಾರು ವರ್ಷಗಳೇ ಕಳೆದಿವೆ. ಇವುಗಳಿಗೆ ಹೊಸ ರೂಪ ನೀಡುವುದರ ಜೊತೆಗೆ ನಗರದ ರಸ್ತೆಗಳು ಹಾಗೂ ನಗರದಿಂದ ಸಂಪರ್ಕಿಸುವ ಜಿಲ್ಲಾ ಹಾಗೂ ತಾಲೂಕು ರಸ್ತೆಗಳ ದುರಸ್ತಿ ಆಗಬೇಕಿದೆ. ಅದಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.ಯಾವ್ಯಾವುದಕ್ಕೋ ಬೇಕಾಬಿಟ್ಟಿ ಹಣಕಾಸು ನೆರವು ನೀಡುವ ಸರ್ಕಾರ, ವರ್ಷಕ್ಕೆ ಒಂದು ಬಾರಿಯಷ್ಟೇ ಗರ್ಭಗುಡಿ ಬಾಗಿಲು ತೆರೆದು, ಲಕ್ಷಾಂತರ ಭಕ್ತರಿಗೆ ದರ್ಶನ ಕರುಣಿಸುವ, ಅವರ ಇಷ್ಟಾರ್ಥ ಈಡೇರಿಸಿ, ಸಂಕಷ್ಟ ನಿವಾರಿಸುವ ಹಾಸನಾಂಬೆ ಜಾತ್ರೋತ್ಸವಕ್ಕೂ ವಿಶೇಷ ಅನುದಾನ ನೀಡುವ ಮೂಲಕ ದೇವಿಯ ಮಹಾತ್ಮೆ, ಹಿರಿಮೆ-ಗರಿಮೆ ಸಾರಲು ನೆರವಾಗಬೇಕು ಎಂದು ವಿನಂತಿಸಿದ್ದಾರೆ. ಕೇವಲ ದೀಪಾಲಂಕಾರ ಮಾಡದೆ ಕಚೇರಿಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿಸುವತ್ತ ಜಿಲ್ಲಾಡಳಿತ ಸಹ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.