ಕೃಷ್ಣ ಎನ್. ಲಮಾಣಿ
ಈ ಬಾರಿ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹರಿಗೋಲು ಸವಾರಿ ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭಗೊಂಡಿದ್ದು, ದೇಶ, ವಿದೇಶಿ ಪ್ರವಾಸಿಗರು ಹರಿಗೋಲಿನಲ್ಲಿ ಸವಾರಿ ಮಾಡಿ ಖುಷಿಪಡುತ್ತಿದ್ದಾರೆ.
ಹಂಪಿ ಕೋದಂಡರಾಮ ದೇವಾಲಯದ ಬಳಿಯ ಚಕ್ರತೀರ್ಥ ಪ್ರದೇಶದಲ್ಲಿ ಹರಿಗೋಲು ಸವಾರಿಯನ್ನು 18 ಮೀನುಗಾರರು ನಡೆಸುತ್ತಿದ್ದಾರೆ. ಈ ಮೀನುಗಾರರು 10 ಹರಿಗೋಲುಗಳನ್ನು ಬಳಸಿ, ದೇಶ, ವಿದೇಶಿ ಪ್ರವಾಸಿಗರಿಗೆ ಹರಿಗೋಲು ಸವಾರಿ ಮಾಡಿಸುತ್ತಿದ್ದಾರೆ.ಹಂಪಿಯಲ್ಲಿ ಹೊಸ ಮಾದರಿಯ ಪ್ರವಾಸೋದ್ಯಮ ಬೆಳೆಯುತ್ತಿದ್ದು, ಸ್ಮಾರಕಗಳ ವೀಕ್ಷಣೆಗೆ ಹರಿಗೋಲು ಸವಾರಿ ಮಾಡುವ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಪ್ರವಾಸಿಗರ ಬೇಡಿಕೆಗೆ ಅನುಸಾರವಾಗಿ ಸ್ಥಳೀಯ ಮೀನುಗಾರರು ನದಿಯಲ್ಲಿ ಹರಿಗೋಲಿನಲ್ಲಿ ಸವಾರಿ ಮಾಡಿಸುತ್ತಿದ್ದಾರೆ.
ಹಂಪಿಯ ಕೋದಂಡರಾಮ ದೇವಾಲಯದ ಬಳಿಯ ಚಕ್ರತೀರ್ಥ ಪ್ರದೇಶದಿಂದ ಋಷಿಮುಖ ಪರ್ವತದ ವರೆಗೆ ಹರಿಗೋಲು ಪಯಣ ನಡೆಯಲಿದೆ. ತುಂಗಭದ್ರಾ ನದಿಯಲ್ಲಿ ಮೀನುಗಾರರು ಸವಾರಿ ಮಾಡಿಸುತ್ತಾರೆ. ಸುತ್ತ ಬೆಟ್ಟಗುಡ್ಡಗಳು, ಸ್ಮಾರಕಗಳ ಮಧ್ಯದಲ್ಲಿ ಈ ಪಯಣ ನಡೆಯಲಿದೆ. ಮೀನುಗಾರರು 45 ನಿಮಿಷದ ವರೆಗೆ ಸವಾರಿ ಮಾಡಿಸುತ್ತಾರೆ. ಒಬ್ಬರಿಗೆ ತಲಾ ₹200 ಶುಲ್ಕ ಇದೆ. ಹಂಪಿ ಸ್ಮಾರಕಗಳ ವೈಭವವನ್ನು ಪ್ರವಾಸಿಗರು ಹರಿಗೋಲಿನಲ್ಲಿ ಕುಳಿತುಕೊಂಡು ಕಣ್ದುಂಬಿಕೊಳ್ಳುತ್ತಾರೆ.
ಜಲಾಶಯದಿಂದ ಈ ವರ್ಷ ನಿರಂತರ ನೀರು ಬಿಟ್ಟ ಹಿನ್ನೆಲೆಯಲ್ಲಿ ಹರಿಗೋಲು ಸೇವೆ ಕೂಡ ಸ್ಥಗಿತಗೊಂಡಿತ್ತು. ಈಗ ಮತ್ತೆ ಮೀನುಗಾರರು ಆರಂಭಿಸಿದ್ದು, ದೇಶ, ವಿದೇಶಿ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಹರಿಗೋಲು ಸವಾರಿ ಮಾಡುತ್ತಿದ್ದಾರೆ. ಇದರಿಂದ ಹೊಸ ಆಯಾಮದ ಪ್ರವಾಸೋದ್ಯಮ ಆರಂಭಗೊಂಡಿದೆ.
ತುಂಗಭದ್ರಾ ನದಿಯಲ್ಲಿ ಹರಿಗೋಲಿನಲ್ಲಿ ತೆರಳಿ ಸ್ಮಾರಕಗಳನ್ನು ವೀಕ್ಷಣೆ ಮಾಡುವುದು ಖುಷಿ ವಿಚಾರವಾಗಿದೆ. ನಾನು ಕಳೆದ ಸಲ ಬಂದಾಗ ಹರಿಗೋಲು ಸವಾರಿ ತಪ್ಪಿಸಿಕೊಂಡಿದ್ದೆ. ಈ ಬಾರಿ ಕುಟುಂಬ ಸಮೇತ ಸವಾರಿ ಮಾಡಿರುವೆ ಎನ್ನುತ್ತಾರೆ ಪ್ರವಾಸಿಗ ನವೀನ್‌ರಾಜ್.