ಕೊಪ್ಪಳ: ನ್ಯಾಯಮೂರ್ತಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ವಕೀಲರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ಆಗ್ರಹಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ಮ್ಯಾಯಮೂರ್ತಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ವಕೀಲರಾಕೇಶ್ ಕಿಶೋರ್, ಕೋರ್ಟ್ ಕಲಾಪದ ವೇಳೆ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಭಾರತದ ಸಂವಿಧಾನ,ನ್ಯಾಯಾಂಗ ವ್ಯವಸ್ಥೆ ಮತ್ತು ಕಾನೂನಿನ ಮೇಲೆ ಅಪಾರ ಗೌರವವಿರುವ ಪ್ರಜೆಗಳಾಗಿ ಮನವಿ ಮೂಲಕ ಗಮನಕ್ಕೆ ತರುತ್ತಿದ್ದೇವೆ.ಈ ಘಟನೆಯು ವ್ಯಕ್ತಿಗತ ಅವಮಾನವಲ್ಲ,ಇದು ಭಾರತದ ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆ ಶ್ರೇಷ್ಠತೆಯ ವಿರುದ್ಧ ನಡೆದ ತೀವ್ರ ಅವಮಾನವಾಗಿದೆ. ಸಂವಿಧಾನದ ಗೌರವ ಮತ್ತು ನ್ಯಾಯದ ನಿಲುವಿಗೆ ಗಂಭೀರ ಬೆದರಿಕೆ. ಕೋರ್ಟ್‌ನೊಳಗೆ ಇಂತಹ ವರ್ತನೆಗಳು ಸಾರ್ವಜನಿಕರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇದೆ.
ಭಾರತವು ಕಾನೂನಿನ ಗೌರವಿಸುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಈ ವ್ಯವಸ್ಥೆಯ ವಿರುದ್ಧ ಇಂತಹ ಅಸಭ್ಯ ಹಾಗೂ ಅಪಮಾನಕಾರಿ ನಡೆಗಳನ್ನು ಖಂಡಿಸಬೇಕು ಹಾಗೂ ಕಾನೂನಿನ ಪ್ರಕಾರ ಸೂಕ್ತವಾಗಿ ಶಿಕ್ಷಿಸಬೇಕೆಂಬುದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಪರಶುರಾಮ ಭಾವಿ, ಮೋಹನ, ಚಂದ್ರಕಾಂತ ದೇವರ ಮನಿ, ಗವಿಸಿದ್ದಪ್ಪ ಹೊಸಮನಿ, ಅಂದಪ್ಪ ಬಳೂಟಗಿ, ಕೃಷ್ಣಮೂರ್ತಿ, ಶಂಕರ ಚಾಗಿ, ಕೃಷ್ಣ ರಾಠೋಡ ಮತ್ತಿತರರು ಉಪಸ್ಥಿತರಿದ್ದರು.