ಕೊಪ್ಪಳ: ಗುತ್ತಿಗೆದಾರರ ಸಂಘ ಮತ್ತು ಕ್ರಷರ್ ಮಾಲಿಕರ ಸಂಘದ ನಡುವೆ ಫೈಟ್ ನಡೆಯುತ್ತಿದ್ದು, ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದೆ. ಈ ನಡುವೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಗುರುವಾರ ವಿವಿಧ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಧ್ಯೆ ಪ್ರವೇಶ ಮಾಡಿ, ಸಮಸ್ಯೆ ನಿಗಿಸುವಂತೆ ಆಗ್ರಹಿಸಿದ್ದಾರೆ.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಗಂಗಾವತಿ ಶಾಸಕ ಗಾಲಿ ಜನಾರ್ದನ ರಡ್ಡಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಲೋಕೋಪಯೋಗಿ ಇಲಾಖೆ ಇಇ ಸೇರಿ ಡಿಸಿ ಡಾ. ಸುರೇಶ ಇಟ್ನಾಳಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದ್ದಾರೆ.ಜಿಲ್ಲೆಯ ಎಲ್ಲ ಕ್ರಷರ್ ಮಾಲೀಕರು ಹಾಗೂ ಗುತ್ತಿಗೆದಾರರು ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದರು. ಜಿಲ್ಲೆಯ ಎಲ್ಲ ರೀತಿಯ ಕಾಮಗಾರಿ, ಸರ್ಕಾರಿ ಮತ್ತು ಖಾಸಗಿ, ಸರಾಗವಾಗಿ ನಡೆಯುತ್ತಿದ್ದವು. ಸಂಸದ ರಾಜಶೇಖರ ಹಿಟ್ನಾಳ್ ಪ್ರೇರಣಾ ಸಂಸ್ಥೆ ಮೂಲಕ ಮಧ್ಯೆ ಪ್ರವೇಶ ಮಾಡಿದ್ದಾರೆ. ಇದರಿಂದ ಸಮಸ್ಯೆ ಉದ್ಭವಿಸಿದೆ. ಸಂಸದರು ತಮ್ಮ ಮಾಲೀಕತ್ವದ ಏಜೆನ್ಸಿ ಮೂಲಕವೇ ಜಲ್ಲಿ ಖರೀದಿಸಬೇಕು ಎನ್ನುವ ತೀರ್ಮಾನ ಮಾಡಿದ್ದಾರೆ. ಜಿಲ್ಲೆಯ ಎಲ್ಲ ಕ್ರಷರ್‌ಗಳ ಮಾಲೀಕರನ್ನು ತಮ್ಮ ಅಧೀನದಲ್ಲಿಟ್ಟುಕೊಂಡಿದ್ದು, ಇನ್ಮುಂದೆ ಯಾರಿಗಾದರೂ ಜಲ್ಲಿ ಬೇಕೆಂದರೆ ಸಾರ್ವಜನಿಕರಾಗಲಿ ಗುತ್ತಿಗೆದಾರರಾಗಲಿ, ಅದನ್ನು ತಮ್ಮ ಏಜೆನ್ಸಿ ಮೂಲಕವೇ ಖರೀದಿಸಬೇಕೆಂಬ ನಿರ್ಣಯ ಮಾಡಿದ್ದಾರೆ.
ಕ್ರಷರ್ ನಿಂದ ಉತ್ಪಾದನೆ ಮಾಡುವ ಜಲ್ಲಿ ಸೇರಿದಂತೆ ಎಲ್ಲವನ್ನು ಪಡೆಯಬೇಕೆಂದರೆ ಅವಕಾಶ ಇಲ್ಲ. ಕ್ರಷರ್ ಮತ್ತು ಗುತ್ತಿಗೆದಾರರು ಮತ್ತು ಸಾರ್ವಜನಿಕರ ಸಂಪರ್ಕ ತಪ್ಪಿಸಿ ಪ್ರೇರಣಾ ಎಜೆನ್ಸಿಯನ್ನು ಸ್ಥಾಪಿಸಿ ಅದರ ಮೂಲಕವೇ ಖರೀದಿಸಬೇಕು ಎನ್ನುವ ಷರತ್ತು ವಿಧಿಸಿರುವುದೇ ಈಗ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಪ್ರೇರಣಾ ಸಂಸ್ಥೆ ನಿಗದಿ ಮಾಡುವ ದರ ಮತ್ತು ಷರತ್ತು ಅನ್ವಯವೇ ಜಲ್ಲಿ ಖರೀದಿಸಬೇಕಾಗಿದೆ. ಪರಸ್ಪರ ಹೊಂದಾಣಿಕೆಯಿಂದ ಉದ್ರಿ ಸೇರಿದಂತೆ ನಾನಾ ಹೊಂದಾಣಿಕೆಯಿಂದ ಖರೀದಿ ಮಾಡುವುದಕ್ಕೆ ಬ್ರೇಕ್ ಹಾಕಿ ಪ್ರೇರಣಾ ಸಂಸ್ಥೆಯ ಮೂಲಕವೇ ರೋಕ್ ವ್ಯವಹಾರ ಮಾಡಬೇಕು ಎನ್ನುವಂತೆ ಮಾಡಿರುವುದು ಗುತ್ತಿಗೆದಾರರನ್ನು ಸಮಸ್ಯೆಗೆ ಸಿಲುಕಿಸಿದೆ.ಸಂಸದ ರಾಜಶೇಖರ ಹಿಟ್ನಾಳ ಈ ಪದ್ಧತಿ ಏಕ ಗವಾಕ್ಷಿ (ಸಿಂಗಲ್ ವಿಂಡೊ) ವಿಧಾನ ಎಂದು ಸಮರ್ಥಿಸಿಕೊಂಡಿದ್ದಾರೆ. ಕ್ರಷರ್ ಮಾಲೀಕರನ್ನು ಏಜೆನ್ಸಿಯೊಳಗೆ ಸೇರಿಸಿಕೊಂಡು ಏಕಸ್ವಾಮ್ಯ ಮಾಡಿಕೊಂಡಿರುವುದು ಗುತ್ತಿಗೆದಾರರಿಗೆ ಹಾಗೂ ಸಾರ್ವಜನಿಕರಿಗೆ ಮರಣ ಶಾಸನವಾಗಲಿದೆ ಎಂದು ಆರೋಪಿಸಿದ್ದಾರೆ.
ಜಿಎಸ್‌ಟಿ, ಆದಾಯ ತೆರಿಗೆ ಪಾವತಿ ಹಾಗೂ ರಾಯಲ್ಟಿಯಲ್ಲಿಯೂ ಇದು ತೊಂದರೆಯಾಗಲಿದೆ. ಕೂಡಲೇ ಈ ಏಕಸ್ವಾಮಿ ಪದ್ಧತಿ ಕೈ ಬಿಡಬೇಕು. ಕ್ರಷರ್ ಮಾಲೀಕರ ಹಾಗೂ ಗುತ್ತಿಗೆದಾರರ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.ಮನವಿ ಸಲ್ಲಿಸುವ ವೇಳೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ ಭೂಮರಡ್ಡಿ, ಹನುಮೇಶ ಕಡೆಮನಿ, ಎಲ್.ಎಂ.ಮಲ್ಲಯ್ಯ, ಕೃಷ್ಣಾ ಇಟ್ಟಂಗಿ, ಯಮನೂರಪ್ಪ ನಡುವಿನ ಮನಿ, ಎಸ್ ಪ್ರಸಾದ, ರಾಜಶೇಖರ, ದೇವಪ್ಪ ಅರಕೇರಿ, ಸುಕರಾಜ ತಾಳಕೇರಿ, ಟಿ. ರತ್ನಾಕರ, ಶಂಕರ ಭಾವಿಮನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.