ಬಳ್ಳಾರಿ: ನಗರದ ರಾಘವ ಕಲಾ ಮಂದಿರದಲ್ಲಿ ಗೋ ಸಮ್ಮಾನ ಆಹ್ವಾನ ಅಭಿಯಾನ ಸಮಿತಿಯಿಂದ ಗೋ ಗೌರವ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಳ್ಳಾರಿ ಗೋ ಶಾಲಾ ಅಧ್ಯಕ್ಷ ವಿನಯ್ ಮಾತನಾಡಿ, ರಾಜ್ಯದಲ್ಲಿನ ಗೋವುಗಳ ಸಂರಕ್ಷಣೆಗಾಗಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಕಾನೂನುಬಾಹಿರವಾಗಿ ಜಾನುವಾರುಗಳ ಸಾಗಣೆ, ಮಾರಾಟ ಹಾಗೂ ಹತ್ಯೆಗೆ ಕಟ್ಟುನಿಟ್ಟಿನ ನಿಯಂತ್ರಣ ವಿಧಿಸಿದೆ. ಕಾಯ್ದೆಯ ಪ್ರಕಾರ ಗೋವು ಹತ್ಯೆ ಸಂಪೂರ್ಣ ನಿಷೇಧಿಸಲಾಗಿದೆ. ಉಲ್ಲಂಘನೆ ಮಾಡಿದವರಿಗೆ ಜೈಲು ಶಿಕ್ಷೆ ಮತ್ತು ದಂಡದ ವ್ಯವಸ್ಥೆ ಇದೆ. ಜಾನುವಾರುಗಳ ಅಕ್ರಮ ಸಾಗಣೆ, ಮಾಂಸ ಮಾರಾಟ, ಸಂಬಂಧಿತ ಚಟುವಟಿಕೆಗಳ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಗೋವುಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿಲ್ಲ. ಗೋಹತ್ಯೆ ಪ್ರಕರಣಗಳು ನಿರಂತರ ನಡೆಯುತ್ತಿವೆ. ಇದನ್ನು ಕೂಡಲೇ ನಿಯಂತ್ರಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ಸಾರ್ವಜನಿಕರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಎಚ್.ಹನುಮಂತಪ್ಪ, ಕೆ.ಎಸ್. ದಿವಾಕರ್, ಶ್ರೇಷ್ಠ ಇಂಟರ್‌ನ್ಯಾಷನಲ್ ಸ್ಕೂಲ್ ನ ಸ್ಥಾಪಕ ಬ್ರಹ್ಮಯ್ಯ ನಾಯ್ಡು, ಬಳ್ಳಾರಿಯ ಶೃಂಗೇರಿ ಶಾರದಾ ಮಠದ ಧರ್ಮದರ್ಶಿ ಬಿಕೆಬಿಎನ್ ಮೂರ್ತಿ, ಸೂರಜ್ ಮಾಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಶರಣು, ಕಣೇಕಲ್ ಎರಿಸ್ವಾಮಿ ಹಾಗೂ ಮಹೇಶಗೌಡ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಜರುಗಿದ ಮೆರವಣಿಗೆಗೆ ಸೋಮಸಮುದ್ರದ ಕೊಟ್ಟೂರುಸ್ವಾಮಿ ಮಠದ ಸಿದ್ಧಲಿಂಗಯ್ಯ ಸ್ವಾಮೀಜಿ ಗೋಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳ ಮೂಲಕ ಹೊರಟ ಮೆರವಣಿಗೆಯಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಹಾಗೂ ಗೋ ಸಂರಕ್ಷಣಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು.