ದಲಿತರ ಮೇಲೆ ದೌರ್ಜನ್ಯ ತಡೆಗೆ ಕಠಿಣ ಕ್ರಮಕ್ಕೆ ಒತ್ತಾಯ

KannadaprabhaNewsNetwork |  
Published : Aug 30, 2026, 01:15 AM IST
29ಕೆಡಿವಿಜಿ1-ದಾವಣಗೆರೆಯಲ್ಲಿ ಶನಿವಾರ ಡಿಎಸ್ಸೆಸ್ ಮುಖಂಡರಾದ ಹರಿಹರ ಎಚ್.ಮಲ್ಲೇಶಪ್ಪ, ಕುಂದುವಾಡ ಮಂಜುನಾಥ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದ ದಲಿತ ಯುವಕರ ಮೇಲೆ ಹಲ್ಲೆ, ದೌರ್ಜನ್ಯ ಎಸಗಿದ 42 ಆರೋಪಿಗಳನ್ನು ತಕ್ಷಣ ಬಂಧಿಸಿ, ಪರಿಶಿಷ್ಟ ಜಾತಿ- ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ತನಿಖೆ ನಡೆಸಿ, ಕಾನೂನು ಶಿಕ್ಷೆಗೆ ಗುರಿಪಡಿಸಿ, ಸಂತ್ರಸ್ತರಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ಒದಗಿಸುವಂತೆ ಕರ್ನಾಟಕ ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟಗಳು ಒತ್ತಾಯಿಸಿವೆ.

- ಬೆಳಲಗೆರೆ ದಲಿತ ಯುವಕರ ಮೇಲೆ ಹಲ್ಲೆ, ಹೊಕ್ರಾಣಿ ಯುವತಿ ಅತ್ಯಾಚಾರ, ಹತ್ಯೆಗೆ ಆಕ್ರೋಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದ ದಲಿತ ಯುವಕರ ಮೇಲೆ ಹಲ್ಲೆ, ದೌರ್ಜನ್ಯ ಎಸಗಿದ 42 ಆರೋಪಿಗಳನ್ನು ತಕ್ಷಣ ಬಂಧಿಸಿ, ಪರಿಶಿಷ್ಟ ಜಾತಿ- ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ತನಿಖೆ ನಡೆಸಿ, ಕಾನೂನು ಶಿಕ್ಷೆಗೆ ಗುರಿಪಡಿಸಿ, ಸಂತ್ರಸ್ತರಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ಒದಗಿಸುವಂತೆ ಕರ್ನಾಟಕ ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟಗಳು ಒತ್ತಾಯಿಸಿವೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್‌ಎಸ್‌ ಮುಖಂಡರಾದ ಎಚ್.ಮಲ್ಲೇಶ, ಕುಂದುವಾಡ ಮಂಜುನಾಥ, ಬೆಳಲಗೆರೆ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತ ಯುವಕರ ಮೇಲೆ ಸವರ್ಣೀಯರು ಹಲ್ಲೆ ಮಾಡಿ, ದೌರ್ಜನ್ಯ ನಡೆಸಿದ್ದು, ರಾಯಚೂರು ಜಿಲ್ಲೆ ಸಿರವಾರ ತಾ. ಹೊಕ್ರಾಣಿ ಗ್ರಾಮದ ದಲಿತ ಯುವತಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದು, ಶವವನ್ನು ಬಾವಿಗೆ ಎಸೆದು ಹೋಗಿರುವ ಪ್ರಕರಣಗಳು ದಲಿತರ ಮೇಲಾಗುತ್ತಿರುವ ಶೋಷಣೆ, ದೌರ್ಜನ್ಯಕ್ಕೆ ಸಾಕ್ಷಿಯಾಗಿವೆ ಎಂದರು.

ದಲಿತರ ಪರವಾದ ಸರ್ಕಾರ, ದಲಿತರ ಹಿತಕಾಯುವ ಸರ್ಕಾರವೆಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಅದೇ ದಲಿತರ ಹಿತ ಕಾಯುವಲ್ಲಿ, ರಕ್ಷಣೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಅಸ್ಪೃಶ್ಯತೆ, ಜಾತಿ ಆಧಾರಿತ ದೌರ್ಜನ್ಯ, ಹಲ್ಲೆ, ಅತ್ಯಾಚಾರ, ಕೊಲೆ, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಇಂತಹದ್ದನ್ನು ತಡೆಗಟ್ಟಲು ತುರ್ತು ಮತ್ತು ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಯಾಕೆ ಮುಂದಾಗಿಲ್ಲ ಎಂದು ಪ್ರಶ್ನಸಿದರು.

ದೇಶದಲ್ಲಿ ದಲಿತರಿಗೆ ಇಂದಿಗೂ ಸ್ವಾತಂತ್ರ್ಯ ಸಿಕ್ಕಿಲ್ಲವೆಂಬುದಕ್ಕೆ ಇಂತಹ ಘಟನೆಗಳೇ ಸಾಕ್ಷಿಯಾಗಿವೆ. ಬುದ್ಧ, ಬಸವ, ಅಂಬೇಡ್ಕರ್‌ ಬಯಸಿದ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯವು ದಲಿತರಿಗೆ ಸಿಕ್ಕಿದೆಯಾ? ಡಾ. ಬಿ.ಆರ್. ಅಂಬೇಡ್ಕರ್‌ ರಚಿಸಿದ ಸಂವಿಧಾನ ನಿಜಕ್ಕೂ ಜಾರಿಯಲ್ಲಿದೆಯಾ? ಬೆಳಲಗೆರೆ ಗ್ರಾಮದ ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತ ಯುವಕರನ್ನು ಅಲ್ಲಿಯೇ ಕಂಬಕ್ಕೆ ಕಟ್ಟಿಹಾಕಿ, ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳನ್ನು ಯಾಕೆ ಬಂಧಿಸಿಲ್ಲ? ದಲಿತ ಯುವಕರ ಮೇಲೆ ಮೇಲೆ ಹಲ್ಲೆ ಮಾಡಿದ 42 ಆರೋಪಿಗಳನ್ನು ಬಸವಾಪಟ್ಟಣ ಪೊಲೀಸರು ತಕ್ಷಣ ಬಂಧಿಸಲಿ ಎಂದು ತಾಕೀತು ಮಾಡಿದರು.

ರಾಯಚೂರು ಜಿಲ್ಲೆ ಸಿರವಾರ ತಾ. ಹೊಕ್ರಾಣಿ ಗ್ರಾಮದ ದಲಿತ ಯುವತಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಕಾಮಾಂಧರು ಅತ್ಯಂತ ಕ್ರೂರವಾಗಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾರೆ. ನಂತರ ಶವವನ್ನು ಬಾವಿಯಲ್ಲಿ ಬಿಸಾಡಿ ಹೋಗಿದ್ದಾರೆ. ನಾಗರೀಕ ಸಮಾಜದಲ್ಲಿ, ಸ್ವತಂತ್ರ ಭಾರತದಲ್ಲಿ ಆಳುವ ಸರ್ಕಾರ ಮಹಿಳೆಯರ ಮಾನ, ಪ್ರಾಣಕ್ಕೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆಯೇ? ದಲಿತರನ್ನು ರಕ್ಷಿಸುತ್ತಿರುವುದಾಗಿ ಘಂಟಾಘೋಷವಾಗಿ ಹೇಳುವ ರಾಜ್ಯ ಸರ್ಕಾರ ಈ ವಿಚಾರದಲ್ಲಿ ವಿಫಲವಾಗಿದೆಯೇ? ದಲಿತರ ಮೇಲೆ ದೌರ್ಜನ್ಯ, ಅಸ್ಪಶ್ಯತೆ, ಆಚರಣೆ, ಸಾಮಾಜಿಕ ಬಹಿಷ್ಕಾರ ಹೆಚ್ಚುತ್ತಿದೆ, ಮಹಿಳೆಯರಿಗೆ ರಕ್ಷಣೆ ಯಾಕೆ ಆಗುತ್ತಿಲ್ಲ ಎಂದು ಅಸಮಾಧಾನಗೊಂಡರು.

ರಾಜ್ಯ ಸರ್ಕಾರವು ಹಿಂದೆ ಯಾವುದೇ ಜಿಲ್ಲೆಯಲ್ಲಿ ದಲಿತರ ಮೇಲೆ ಅಸ್ಪೃಶ್ಯತೆ, ದೌರ್ಜನ್ಯ ನಡೆದರೆ ಅದಕ್ಕೆ ನೇರವಾಗಿ ಆಯಾ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳೇ ನೇರ ಹೊಣೆ ಮಾಡಿ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ತಕ್ಷಣವೇ ಸಿರವಾರ ತಾ. ಹೊಕ್ರಾಣಿ ಗ್ರಾಮದ ದಲಿತ ಯುವತಿ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣದ ತನಿಖೆ ಕೈಗೊಂಡು, ಆರೋಪಿಗಳನ್ನು ಬಂಧಿಸಿ, ಮೃತಳು ಮತ್ತು ಕುಟುಂಬಕ್ಕೆ ನ್ಯಾಯ ಕೊಡಿಸಲಿ. ಅತ್ಯಾಚಾರ ಎಸಗಿದ ಕಾಮಾಂಧರನ್ನು ನಿರ್ದಾಕ್ಷಿಣ್ಯವಾಗಿ ಎನ್‌ಕೌಂಟರ್ ಮಾಡುವ ಕಾನೂನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಕೆ. ಆದಿಲ್‌ ಖಾನ್‌, ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯ ಗಾಂಧಿ ನಗರ ಎಂ.ಲಿಂಗರಾಜು, ಮಾದಿಗ ದಂಡೋರ ಸಮಿತಿ ಚಿದಾನಂದಪ್ಪ, ಕಾನೂನು ವಿದ್ಯಾರ್ಥಿಗಳಾದ ಅರುಣ ಕುಮಾರ, ಕಿರಣಕುಮಾರ, ಶಕುಂತಲಾ ಮಾಚಿಹಳ್ಳಿ, ಮಾಯಕೊಂಡ ಜೀವನ್‌, ಅಭಿಲಾಶ್ ಇತರರು ಇದ್ದರು.

- - -

(ಬಾಕ್ಸ್‌)

* ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಸ್ಥಿತಿಗತಿ ಬಗ್ಗೆ ಸರ್ಕಾರ ಪರಿಶೀಲಿಸಲಿ

ಇಡೀ ರಾಜ್ಯದಲ್ಲಿ 1.1.2026 ರಿಂದ ಈಚಿನ ಹೊಕ್ರಾಣಿ ಗ್ರಾಮದ ಯುವತಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದವರೆಗೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾದ ಸದ್ಯದ ಸ್ಥಿತಿಗತಿ ಬಗ್ಗೆ ಸರ್ಕಾರ ಪರಿಶೀಲಿಸಲಿ. ದಲಿತರು ಯಾವ ವಾತಾವರಣದಲ್ಲಿ ಜೀವಿಸುತ್ತಿದ್ದಾರೆಂಬ ಬಗ್ಗೆ ಸರ್ಕಾರ ಮಾಹಿತಿ ಪಡೆಯಲಿ. ಅಸ್ಪೃಶ್ಯತೆ ದೌರ್ಜನ್ಯ ನಡೆದ ಪ್ರದೇಶದಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಕಾನೂನು ಅರಿವು ಮೂಡಿಸಬೇಕು. ಹೊಕ್ರಾಣಿ ಗ್ರಾಮದ ಮೃತ ದಲಿತ ಯುವತಿ ಕುಟುಂಬಕ್ಕೆ ಕನಿಷ್ಠ ₹50 ಲಕ್ಷ ಪರಿಹಾರ ನೀಡಬೇಕು. ಮೃತಳ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಹರಿಹರ ಎಚ್.ಮಲ್ಲೇಶ, ಕುಂದುವಾಡ ಮಂಜುನಾಥ ಆಗ್ರಹಿಸಿದರು.

- - -

-29ಕೆಡಿವಿಜಿ1: ದಾವಣಗೆರೆಯಲ್ಲಿ ಶನಿವಾರ ಡಿಎಸ್ಎಸ್‌ ಮುಖಂಡರಾದ ಹರಿಹರ ಎಚ್.ಮಲ್ಲೇಶಪ್ಪ, ಕುಂದುವಾಡ ಮಂಜುನಾಥ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಆರ್ಥಿಕ ಅಭಿವೃದ್ಧಿಗೆ ಧಗ್ರಾಯೋ ಸಹಕಾರಿ
ಪಡಿತರ ಅಕ್ಕಿ-ರಾಗಿ ಅಕ್ರಮ ಸಾಗಾಟ ಅಪಘಾತದಲ್ಲಿ ಬಯಲು!