ಹಾವೇರಿ: ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರಗಳು ತಾರತಮ್ಯ ಮಾಡುತ್ತಿವೆ. ಕೂಡಲಸಂಗಮದಲ್ಲಿ ಬಸವಣ್ಣನವರ ಐಕ್ಯ ಮಂಟಪವನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲಿಯೇ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪವನ್ನೂ ಅಭಿವೃದ್ಧಿಪಡಿಸಿ, ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಅಂಬಿಗ ಬೆಸ್ತರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ಒತ್ತಾಯಿಸಿದರು.
12ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಬೇಕು. ಕೂಡಲಸಂಗಮದಲ್ಲಿ ಬಸವಣ್ಣನವರ ಐಕ್ಯ ಮಂಟಪವನ್ನು ಅಭಿವೃದ್ಧಿಪಡಿಸಿದಂತೆ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪವನ್ನೂ ಅಭಿವೃದ್ಧಿಪಡಿಸಲು ಸರಕಾರಗಳು ಮುಂದಾಗಬೇಕು. ಈ ಮೂಲಕ ಅಂಬಿಗ-ಬೆಸ್ತ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.
ನ.30ರಂದು ಬೃಹತ್ ಪ್ರತಿಭಟನೆ: ಐಕ್ಯ ಮಂಟಪದ ಅಭಿವೃದ್ಧಿಗೆ ಒತ್ತಾಯಿಸಿ ಉಗ್ರ ಹೋರಾಟ ನಡೆಸಲು ಸಭೆ ನಿರ್ಧರಿಸಿದೆ. ಇದರ ಭಾಗವಾಗಿ ಮುಂದಿನ ವಾರ ಹಾವೇರಿ ನಗರದಲ್ಲಿ ರಾಜ್ಯದ 31 ಜಿಲ್ಲೆಗಳ ಅಂಬಿಗ-ಬೆಸ್ತರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಮುಖಂಡರು, ರಾಜಕೀಯ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸಿ ಸಭೆ ನಡೆಸಲು ತೀರ್ಮಾನಿಸಲಾಯಿತು.ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನ.30ರಂದು ಹಾವೇರಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಲಕ್ಷಕ್ಕೂ ಅಧಿಕ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಐಕ್ಯ ಮಂಟಪದ ಅಭಿವೃದ್ಧಿ ಹಾಗೂ ಸಮಾಜಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಮಾಜದ ಜನರನ್ನು ಸಂಘಟಿಸಿ ಹೋರಾಟ ನಡೆಸಲು ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.