-ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹಕ್ಕು ಹೋರಾಟ ಸಮಿತಿಯಿಂದ ಸಚಿವರಿಗೆ ಮನವಿ
ಕನ್ನಡಪ್ರಭ ವಾರ್ತೆ ಯಾದಗಿರಿ
ಸರ್ಕಾರದ ಸವಲತ್ತು ಪಡೆಯಲು ಪ್ರತ್ಯೇಕ ನಿಗಮ ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹಕ್ಕು ಹೋರಾಟ ಸಮಿತಿಯಿಂದ ಬೆಳಗಾವಿ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು ಎಂದು ಹೋರಾಟ ಸಮಿತಿ ಮಹಾ ಒಕ್ಕೂದ ರಾಜ್ಯ ಮುಖಂಡ ಬಿ.ಎಲ್. ಆಂಜನೇಯ ತಿಳಿಸಿದ್ದಾರೆ.ಅಲೆಮಾರಿ ಸಮುದಾಯಗಳ ಪೈಕಿ 49 ಜಾತಿಯವರು ಒಳಗೊಂಡಿದ್ದು, ನಮಗೆ ಎಸ್ಸಿ ನಿಗಮದಲ್ಲಿ ಕೇವಲ ಶೇ.1ರಷ್ಟು ಮೀಸಲಾತಿ ಇರುವುದರಿಂದ ಇದುವರೆಗೆ ಕನಿಷ್ಟ ಪ್ರಮಾಣದ ಸರ್ಕಾರದ ಸವಲತ್ತು ಸಿಗದೇ ಅಲೆಯುವಂತಾಗಿದೆ. ಎಲ್ಲಿಯೂ ಸರ್ಕಾರದ ಸೌಲತ್ತುಗಳು ನೇರವಾಗಿ ಸಿಗದಂತಾಗಿ ಸಮುದಾಯಗಳು ಅಭಿವೃದ್ಧಿ ಹೊಂದದಂತಾಗಿದೆ ಎಂದರು.
ಈ ಹಿಂದಿನ ಸರ್ಕಾರ ಅಲೆಮಾರಿಗಳಿಗೆ ಮನೆ ನಿರ್ಮಾಣಕ್ಕೆ 300 ಕೋಟಿ ರು. ನೀಡಿತ್ತು. ಆದರೆ, ಈ ಸರ್ಕಾರ ಆ ಹಣವನ್ನು ಕಿತ್ತುಕೊಂಡು ಗ್ಯಾರೆಂಟಿಗಳಿಗೆ ಹಾಕಿ ನಮಗೆ ಅನ್ಯಾಯ ಮಾಡಲಾಗಿದೆ. ಈಗ ತಕ್ಷಣ ಆ ಹಣವನ್ನು ನಮ್ಮ ಸಮುದಾಯಗಳ ಮನೆ ನಿರ್ಮಾಣಕ್ಕೆ ಮತ್ತೆ ನೀಡಬೇಕು ಎಂದು ಒತ್ತಾಯಿಸಿದ್ದಾಗಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 49 ಸಮುದಾಯಗಳ ಮುಖಂಡರು ಸೇರಿದಂತೆ 4000 ಜನ ಬೆಳಗಾವಿ ಚಲೋ ಪ್ರತಿಭಟನೆಯಲ್ಲಿ ಆಗಮಿಸಿ ಪಾಲ್ಗೊಂಡಿದ್ದರು.
ಫೋಟೊ: ಸರ್ಕಾರದ ಸವಲತ್ತುಗಳನ್ನು ಪಡೆಯಲು ಪ್ರತ್ಯೇಕ ನಿಗಮ ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹಕ್ಕು ಹೋರಾಟ ಸಮಿತಿಯಿಂದ ಬೆಳಗಾವಿ ಸುವರ್ಣ ಸೌಧದ ಬಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.