ಅನ್ಯರಾಜ್ಯ ವ್ಯಾಪಾರಸ್ಥರ ಅಂಗಡಿ ತೆರವಿಗೆ ಆಗ್ರಹ

KannadaprabhaNewsNetwork |  
Published : Jan 28, 2025, 12:50 AM IST
ಕಲಾದಗಿ | Kannada Prabha

ಸಾರಾಂಶ

ಅನ್ಯರಾಜ್ಯದ ವ್ಯಾಪಾರಸ್ಥರ ವಿರುದ್ಧ ಉಪತಹಸೀಲ್ದಾರ್‌ ಆರ್.ಆರ್.ಕುಲಕರ್ಣಿಗೆ ಕಲಾದಗಿ ವ್ಯಾಪಾರಸ್ಥರ ಸಂಘ ಹಾಗೂ ಕನ್ನಡಪರ ಸಂಘಟನೆ ಪ್ರಮುಖರು ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಗ್ರಾಮದಲ್ಲಿ ಕಳಪೆ ವಸ್ತು ಮಾರುವ ಹಾಗೂ ಅಕ್ರಮ ವ್ಯವಹಾರ ಮಾಡುತ್ತಾ ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಅನ್ಯರಾಜ್ಯದ ವ್ಯಾಪಾರಸ್ಥರ ಅಂಗಡಿಗಳನ್ನು ಸರ್ಕಾರ ಕೂಡಲೇ ತೆರುವುಗೊಳಿಸದಿದ್ದರೆ ಮುಂದಿನ ಹೋರಾಟ ಉಗ್ರವಾಗಿರುತ್ತದೆ ಎಂದು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಎಚ್ಚರಿಸಿದರು.

ಗ್ರಾಮದಲ್ಲಿ ಅನ್ಯರಾಜ್ಯದವರ ವ್ಯಾಪಾರ ವಹಿವಾಟು ವಿರೋಧಿಸಿ ಸ್ಥಳೀಯ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸೋಮವಾರ ಕರೆ ನೀಡಿದ್ದ ಕಲಾದಗಿ ಬಂದ್ ಪ್ರತಿಭಟನೆಯಲ್ಲಿ ನಾಡಕಚೇರಿ ಮುಂದೆ ಉಪತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗ ವ್ಯಾಪಾರಸ್ಥರಿಗೆ ಆದ್ಯತೆ ಇರಬೇಕು. ಬೇರೆ ರಾಜ್ಯದವರು ನಮ್ಮ ಅನ್ನವನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ತೆರಿಗೆ ವಂಚಿಸುತ್ತಿರುವ ಇವರ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಬೇಕು ಎಂದು ಆಗ್ರಹಿಸಿದ ಅವರು, ಸ್ಥಳೀಯ ಅಂಗಡಿಗಳ ಮಾಲೀಕರು ಈ ವ್ಯಾಪಾರಿಗಳನ್ನು ಬಿಡಿಸದಿದ್ದರೆ ಮುಂದೆ ಅವರ ಮನೆಯ ಮುಂದೆಯೇ ಪ್ರತಿಭಟನೆ ಮಾಡುವುದಾಗಿ ಹೇಳಿದರು.

ಯುವಮುಖಂಡ ಬೀಳಗಿಯ ಪ್ರವೀಣ ಪಾಟೀಲ ಮಾತನಾಡಿ, ಫೆ.15ರ ಗಡುವು ನೀಡಿ ಇಷ್ಟರೊಳಗೆ ಗ್ರಾಮದಿಂದ ಬೇರೆ ರಾಜ್ಯದ ಅಂಗಡಿಕಾರರನ್ನು ಕಳಿಸದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕರವೇ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಹಿರೇಮಠ ಹಾಗೂ ಹೋರಾಟಗಾರ್ತಿ ಮಂಜುಳಾ ಮೇರಾಕರ ಮಾತನಾಡಿ, ಬೀಳಗಿಯಲ್ಲಿ ಇಂತಹದೆ ಹೋರಾಟ ಮಾಡಿ ಯಶಸ್ವಿಯಾಗಿದ್ದು, ಇಷ್ಟಕ್ಕೆ ವ್ಯವಸ್ಥೆ ಸರಿಯಾಗದಿದ್ದರೆ ಇಲ್ಲಿಯೂ ಇನ್ನುಳಿದ ಹೋರಾಟಗಾರರೊಂದಿಗೆ ಊರಿನ ಮಹಿಳೆಯರ ಜೊತೆಗೂಡಿ ಹೋರಾಟಕ್ಕಿಳಿಯಲಾಗುವುದು ಅನಿವಾರ್ಯ ಎಂದರು.

ಕಲಾದಗಿ ವ್ಯಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಪ್ರಾಣೇಶ ವಿಜಾಪುರ, ಅಧ್ಯಕ್ಷ ಸುಭಾಸ ದುರ್ವೆ, ಉಪಾಧ್ಯಕ್ಷ ಸೈಪುದ್ದೀನ ಹುಬ್ಬಳ್ಳಿ, ಕಾರ್ಯದರ್ಶಿ ಮಹಾಗುಂಡಪ್ಪ ಮುಧೋಳ, ಬಶೆಟ್ಟೆಪ್ಪ ಅಂಗಡಿ, ಸಲೀಂ ಶೇಖ, ನಿಂಗಪ್ಪ ಅರಕೇರಿ, ಪಕೀರಪ್ಪ ಮಾದರ, ಬಸವರಾಜ ಕುಳ್ಳೊಳ್ಳಿ, ಮಲ್ಲಪ್ಪ ಜಮಖಂಡಿ, ಭೀಮಶಿ ಕರಡಿಗುಡ್ಡ, ಶಶಿಧರ ಮಲ್ಲಿಕಾರ್ಜುನಮಠ, ಮಲ್ಲು ಕುಂದರಗಿ, ಸಂಘಟನೆಗಳ ಮಂಜುನಾಥ ಪವಾರ, ನಜೀರಹ್ಮದ ಧನ್ನೂರ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ರಸ್ತೆ ಬಂದ್, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಬೆಳಗ್ಗೆ 11ರ ಹೊತ್ತಿಗೆ ಗ್ರಾಮದ ಹೊರರಸ್ತೆಯಲ್ಲಿರುವ ಶ್ರೀಸಾಯಿ ಮಂದಿರದ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ಅಲ್ಲಿ ಕೆಲಹೊತ್ತು ಬಾಗಲಕೋಟೆ-ಬೆಳಗಾವಿ ಪ್ರಮುಖ ರಸ್ತೆ ಬಂದ್ ಮಾಡಿ ಹಾಗೂ ಕೊಬ್ಬರಿ ಸರ್ಕಲ್‍ನಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಅನ್ಯರಾಜ್ಯದ ಅಂಗಡಿಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ವ್ಯಾಪಾರಸ್ಥರು, ಮುಖಂಡರು, ಮಹಿಳೆಯರು, ವಿವಿಧ ಸಂಘಟನೆಯವರು ಸೇರಿದಂತೆ ಬೀಳಗಿ, ಬಾಗಲಕೋಟೆ ಮುಂತಾದ ಕಡೆಗಳಿಂದ ಆಗಮಿಸಿದ್ದ ಸಂಘಟನೆಗಳವರು ಪಾಲ್ಗೊಂಡಿದ್ದ ಪ್ರತಿಭಟನಾ ಮೆರವಣಿಗೆ ಶ್ರೀಸಾಯಿಮಂದಿರದಿಂದ ಹೊರಟು ಬಸ್‍ನಿಲ್ದಾಣ, ಅಂಬೇಡ್ಕರ ವೃತ್ತ, ಹೊಸೂರ ಚೌಕ, ಬಸವಣ್ಣದೇವರ ಓಣಿ, ಕೊಬ್ರಿ ಸರ್ಕಲ್, ಪಂಚಾಯತ್, ಸವಾಕಟ್ಟಿ,ದರ್ಗಾ, ಬಸವೇಶ್ವರ ಸರ್ಕಲ್ ಮೂಲಕ ಸಾಗಿ ನಾಡಕಚೇರಿ ತಲುಪಿ ಸಮಾಪ್ತಿಗೊಂಡಿತು.

ಕಲಾದಗಿ ನಿಶಬ್ಧ, ಬಂದ್ ಯಶಸ್ವಿ:

ಕಲಾದಗಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘವು ಕರೆ ನೀಡಿದ ಕಲಾದಗಿ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು. ಮಾರುಕಟ್ಟೆ, ಬಸವೇಶ್ವರ ಸರ್ಕಲ ಸೇರಿದಂತೆ ಎಲ್ಲ ಕಡೆಗಳಲ್ಲಿ ಅಂಗಡಿಗಳು ಬಂದ್ ಆಗಿ ಕಲಾದಗಿ ಸಂಪೂರ್ಣ ನಿಶಬ್ಧವಾಗಿತ್ತು. ಬೆಳಗ್ಗೆ 6 ಗಂಟೆಯಿಂದಲೇ ಎಲ್ಲಾ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿ ಬಂದ್ ಮಾಡಿ ತಮ್ಮ ಬೆಂಬಲ ಸೂಚಿಸಿದ್ದವು. ಆಸ್ಪತ್ರೆಗಳು, ಮೆಡಿಕಲ್ ಶಾಪ್, ಬ್ಯಾಂಕ್ ಮಾತ್ರ ಕಾರ್ಯನಿರ್ವಹಿಸಿದ್ದು ಕಂಡು ಬಂತು, ಉಳಿದಂತೆ ಎಲ್ಲಾ ತರಹದ ಅಂಗಡಿಗಳು ಬಂದ್ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದವು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ