ಕಾರಟಗಿ: ಸಮರ್ಪಕ ನೀರು ಪೂರೈಕೆ ಮತ್ತು ಮೇಲ್ಭಾಗದಲ್ಲಿ ನೀರುಗಳ್ಳತನ ತಡೆಯಬೇಕೆಂದು ಒತ್ತಾಯಿಸಿ ೩೧ನೇ ವಿತರಣಾ ನಾಲೆ ವ್ಯಾಪ್ತಿಯ ಕೊನೆ ಹಾಗೂ ಕೆಳಭಾಗದ ೧೧ಕ್ಕೂ ಹೆಚ್ಚು ಗ್ರಾಮಗಳ ರೈತರು ಶನಿವಾರ ಇಲ್ಲಿನ ನೀರಾವರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಧರಣಿ ಕುಳಿತರು.
ಕಾಲುವೆಗೆ,ಉಪಕಾಲುವೆಗೆ ನಿಗದಿಪಡಿಸಿದ ನೀರಿನ ಲಭ್ಯತೆ ಅನುಗುಣವಾಗಿ ನೀರು ಪೂರೈಸಿ ನಮ್ಮ ಬೆಳೆ ಒಣಗುತ್ತಿವೆ, ಇನ್ನು ಕೆಲವರು ನಾಟಿ ಮಾಡಿಲ್ಲ, ನಾಟಿಗೆ ಅನುಕೂಲ ಮಾಡಿಕೊಡಿ ಎಂದು ಒತ್ತಾಯಿಸಿದರು. ವಿತರಣಾ ಕಾಲುವೆಗಳಿಗೆ ಕಾರಟಗಿ, ಚೆಳ್ಳೂರು, ಸೋಮನಾಳ ಭಾಗದಲ್ಲಿ ಅಕ್ರಮವಾಗಿ ಮೋಟರ್ ಇಟ್ಟುಕೊಂಡು ಅಕ್ರಮವಾಗಿ ನೀರುಗಳ್ಳತನ ನಡೆಯುತ್ತಿದೆ. ದೇವಿಕ್ಯಾಂಪ್ ಗಣೇಶಕ್ಯಾಂಪ್ ಭಾಗದಲ್ಲಿ ಹಲವು ಕಡೆ ಪ್ರಭಾವಿಗಳು ಕಾಲುವೆಗೆ ಹಾಡಹಗಲೇ ಬೃಹತ್ ಪಂಪ್‌ಸೆಟ್ ಹಾಕಿಕೊಂಡು ನೀರು ಪಡಯುತ್ತಿದ್ದಾರೆ. ಇದರಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗಿದೆ. ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ಅಕ್ರಮ ನೀರಾವರಿ ಪಂಪ್‌ಸೆಟ್ ತೆರವುಗೊಳಿಸಬೇಕೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪಟ್ಟು: ಕೆಳಭಾಗಕ್ಕೆ ನೀರು ಬಿಡಲೇಬೇಕು ಎಂದು ಪಟ್ಟು ಹಿಡಿದ ರೈತರು ಬೆಳಗ್ಗೆ ೧೦ಕ್ಕೆ ೩೧ನೇ ನೀರಾವರಿ ಕಚೇರಿಗೆ ಧಾವಿಸಿ ಧರಣಿ ನಡೆಸಿದರು. ಮಧ್ಯಾಹ್ನದ ನಂತರ ೩೧/೬ರ ಸೆಕ್ಷನ್ ಆಫೀಸರ್ ಸಹನಾ ಲಕ್ಕುಂಡಿ ಸ್ಥಳಕ್ಕೆ ಆಗಮಿಸಿ ರೈತರಿಗೆ ನೀರು ಪೂರೈಸುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾನಿರತ ರೈತರು ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಕಷ್ಟ ಕೇಳುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಮಹಿಳಾ ಅಧಿಕಾರಿಗೆ ರೈತರು ಸಾಂಕೇತಿಕವಾಗಿ ತಮ್ಮ ಮನವಿ ಸಲ್ಲಿಸಿದರು. ನಂತರ ಸಂಜೆ ೭ರವರೆಗೂ ಧರಣಿ ಮುಂದುವರೆಸಿದ್ದರು.೩೧ನೇ ವಿತರಣಾ ಕಾಲುವೆ ವ್ಯಾಪ್ತಿಯ ಎಇಇ ವೆಂಕಟೇಶ ಕಳೆದ ವಾರದಿಂದ ಸುಳ್ಳು ಹೇಳಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳುತ್ತಿದ್ದಾರೆ. ಇವರನ್ನು ಬಿಟ್ಟು ಮೇಲಾಧಿಕಾರಿಗಳು ಯಾರೇ ಇರಲಿ ಅವರು ಬರಲೇಬೇಕು ಎಂದು ರೈತರು ಪಟ್ಟುಹಿಡಿದರು.
ನೀರು ಬಳಕೆದಾರರ ಸಂಘದ ಅಧ್ಯಕ್ಷ ದಶರಥರೆಡ್ಡಿ ಚೆನ್ನಳ್ಳಿ ಅಧಿಕೃತ ನೀರಾವರಿ ಪದ್ಧತಿ ಹೊಂದಿದ ನಮಗೆ ನೀರು ತಲುಪಿಸಿ, ಅನಧಿಕೃತ ನೀರು ಬಳಕೆದಾರರಿಗೆ ಕಡಿವಾಣ ಹಾಕಿ, ನಮಗೆ ನಮ್ಮ ಪಾಲಿನ ನೀರು ಪೂರೈಕೆಯಾಗುವವರೆಗೂ ನಾವು ಹೋರಾಟ ನಡೆಸುತ್ತೇವೆ, ನೀರಾವರಿ ಅಧಿಕಾರಿ ರೈತರಿಗೆ ಸ್ಪಂದಿಸುತ್ತಿಲ್ಲ, ನಾವು ಕಾರಟಗಿ ನೀರಾವರಿ ಕಚೇರಿ ಮುಂದೆ ಧರಣಿ ನಡೆಸಿದ್ದು, ಕಾಲುವೆಗೆ ಸಮಪರ್ಕ ನೀರು ಪೂರೈಕೆಯಾಗುವವರೆಗೂ ನಮ್ಮ ಶಾಂತಿಯುತ ಹೋರಾಟ ನಿಲ್ಲದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಕೇಳಿ ಅಕ್ರಮ ನೀರಾವರಿಗೆ ಕಡಿವಾಣ ಹಾಕುವವರೆಗೂ ನಾವು ಜಾಗಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಸಿದರು.