ಮಡಿಕೇರಿ : ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯ ಉಪ ಆಯುಕ್ತರು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆದು ರಕ್ಷಣಾ ಮದ್ಯವನ್ನು ಶುಭ ಸಮಾರಂಭಗಳಲ್ಲಿ ಉಪಯೋಗಿಸಲು ಅನುವು ಮಾಡಿಕೊಡಬೇಕು ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ ಒತ್ತಾಯಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಮಾತನಾಡಿ, ಕೊಡಗಿನಲ್ಲಿ ಪ್ರತಿಯೊಂದು ಶುಭ ಸಮಾರಂಭಗಳಲ್ಲಿ ಮದ್ಯ ಬಳಕೆ ಮಾಡಲಾಗುತ್ತದೆ. ಇದಕ್ಕೆಲ್ಲಾ ವಿಶೇಷ ಅನುಮತಿ ಪಡೆಯಬೇಕಾ ಎಂದು ಪ್ರಶ್ನಿಸಿದರು. ನಾವು ಕಳ್ಳಬಟ್ಟಿ ಮಾರುತ್ತಿಲ್ಲ. ದೇಶದ ರಕ್ಷಣೆ ಮಾಡಿದಕ್ಕೆ ನಮಗೆ ಸರ್ಕಾರ ರಕ್ಷಣಾ ಮದ್ಯವನ್ನು ನೀಡುತ್ತಿದೆ. ಅದನ್ನು ನಮ್ಮ ಶುಭ ಕಾರ್ಯಕ್ರಮಗಳಿಗೆ ಬಳಸಲು ಅನುಮತಿ ಪಡೆಯುವಂತೆ ಹೇಳುತ್ತಿರುವುದು ಮಾಜಿ ಸೈನಿಕರಿಗೆ ತೋರುವ ಅಗೌರವವಾಗಿದೆ ಎಂದು ಆರೋಪಿಸಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ಮಾತನಾಡಿ, ಪರವಾನಗಿ ಇಲ್ಲದ ಮದ್ಯ, ಅಕ್ರಮ ಮದ್ಯಗಳು ಜಿಲ್ಲೆಯ ಒಳಭಾಗಕ್ಕೆ ನುಸುಳದಂತೆ ಮೊದಲು ಇಲಾಖೆಗಳು ಎಚ್ಚರವಹಿಸಬೇಕು. ನಕಲಿ ಮದ್ಯ ಹಿಡಿಯಲು ಚೆಕ್ ಪೋಸ್ಟ್ ನಲ್ಲಿ ಕಠಿಣವಾಗಿ ಕಾರ್ಯನಿರ್ವಹಿಸಲಿ. ಅದನ್ನು ಬಿಟ್ಟು ಕೊಡಗಿನ ಜನರಿಗೆ ಮಾನಸಿಕ ಹಿಂಸೆ ನೀಡಿದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಸೈನಿಕರಾದ ಎಚ್.ಆರ್.ವಾಸಪ್ಪ, ಕೆ.ಮಂದಣ್ಣ ಹಾಗೂ ಹರೀಶ್ ಸುದ್ದಿಗೋಷ್ಠಿಯಲ್ಲಿದ್ದರು.