ಪದವಿ ಕಾಲೇಜುಗಳಲ್ಲಿ ಎಸ್‌ಇಪಿ ಜಾರಿ ಸುತ್ತೋಲೆ ವಾಪಸ್‌ಗೆ ಆಗ್ರಹ

KannadaprabhaNewsNetwork | Published : May 12, 2024 1:24 AM

ಸಾರಾಂಶ

ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿಗೆ ತರುವ ಮುನ್ನ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಶಹಾಪೂರ್‌ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಪದವಿ ಶಿಕ್ಷಣದ ಅವಧಿಯನ್ನು ನಾಲ್ಕು ವರ್ಷ ಬದಲು ಮೂರು ವರ್ಷಕ್ಕೆ ಸೀಮಿತಗೊಳಿಸಿ ಸರ್ಕಾರ ಹೊಡಿಸಿರುವ ಸುತ್ತೋಲೆಯನ್ನು ವಾಪಸ್‌ ಪಡೆಯಬೇಕು. ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಬದಲು ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿಗೆ ತರುವ ಮುನ್ನ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಶಹಾಪೂರ್‌ ಆಗ್ರಹಿಸಿದ್ದಾರೆ.

ಪೀಪಲ್ಸ್‌ ಫಾರಂ ಫಾರ್‌ ಕರ್ನಾಟಕ ಎಜುಕೇಶನ್‌ ಆಶ್ರಯದಲ್ಲಿ ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಸಿ ಮಾಜಿ ಅಧ್ಯಕ್ಷ ಸುಖದೇವ್‌ ಥೋರಟ್‌ ಸಮಿತಿ ಎಸ್‌ಇಪಿ ಜಾರಿ ಕುರಿತಂತೆ ಕೇವಲ ಮಧ್ಯಂತರ ವರದಿಯನ್ನಷ್ಟೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿರುವ ವಿಚಾರಗಳ ಬಗ್ಗೆ ಚರ್ಚೆಯೂ ನಡೆದಿಲ್ಲ. ಈಗ ಮಧ್ಯಂತರ ವರದಿಯನ್ನು ಮುಂದಿಟ್ಟುಕೊಂಡು ಏಕಾಏಕಿ ಪದವಿ ಶಿಕ್ಷಣದ ಅವಧಿಯನ್ನು ನಾಲ್ಕರಿಂದ ಮೂರು ವರ್ಷಕ್ಕೆ ಇಳಿಕೆ ಮಾಡಲು ಹೊರಟಿರುವುದು ಸರಿಯಲ್ಲ ಎಂದರು. ಪದವಿ ವಿದ್ಯಾರ್ಥಿಗಳಿಗೆ ಸಂಕಷ್ಟ:

ನಾಲ್ಕು ವರ್ಷ ಪದವಿ ಪೂರೈಸಿದವರು ನೇರ ನೀಟ್‌ ಪರೀಕ್ಷೆಗೆ ಬರೆಯಬಹುದು, ಉನ್ನತ ಪದವಿ ಪಡೆದವರು ನೇರವಾಗಿ ಪಿಎಚ್‌ಡಿ ಪ್ರವೇಶ ಮಾಡಬಹುದು ಎಂದು ಯುಜಿಸಿ ಆದೇಶಿಸಿದೆ. ಹಾಗಿರುವಾಗ ಈಗ ಮೂರು ವರ್ಷದ ಪದವಿ ಮಾಡಿದರೆ ಅದರಿಂದ ಉಂಟಾಗಬಹುದಾದ ಪರಿಣಾಮದ ಬಗ್ಗೆ ಸರ್ಕಾರ ಯೋಚಿಸಿದೆಯೇ ಎಂದು ಅವರು ಪ್ರಶ್ನಿಸಿದರು.ಎನ್ಇಪಿ ಸಮಸ್ಯೆ ಏನು?:

ಎನ್‌ಇಪಿಯ ನಾಲ್ಕು ವರ್ಷದ ಪದವಿ ಶಿಕ್ಷಣದಲ್ಲಿ ಯಾವ ವರ್ಷ ಬೇಕಾದರೂ ಕಲಿಕೆ ಪೂರೈಸಬಹುದು. ಆಯಾ ವರ್ಷಕ್ಕೆ ಪ್ರತ್ಯೇಕ ಸರ್ಟಿಫಿಕೆಟ್‌ ನೀಡಲಾಗುತ್ತದೆ. ಇದರಿಂದ ಉದ್ಯೋಗಕ್ಕೂ ತೊಂದರೆಯಾಗುವುದಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ತಿಳಿದುಕೊಳ್ಳದೆ ಎಸ್‌ಇಪಿ ಜಾರಿಗೆ ತರಲು ಹೊರಟಿರುವುದನ್ನು ವಿರೋಧಿಸುವುದಾಗಿ ಅವರು ಹೇಳಿದರು.

ಪೀಪಲ್ಸ್‌ ಫಾರಂ ಫಾರ್‌ ಕರ್ನಾಟಕ ಎಜುಕೇಶನ್‌ ಸಂಚಾಲಕ ಪ್ರೊ.ರಾಜಶೇಖರ್‌ ಹೆಬ್ಬಾರ್‌, ಕಾರ್ಯದರ್ಶಿ ರಮೇಶ್‌ ಕೆ. ಇದ್ದರು.

Share this article