ಶಿರಸಿ: ಜಾಗದ ವಿವಾದದ ಹಿನ್ನೆಲೆ ಶಾಸಕರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕೆಲವರು ಯೋಧನೊಬ್ಬನ ಮನೆಗೆ ಅಕ್ರಮ ಪ್ರವೇಶ ಮಾಡಿ, ದಾಂಧಲೆ ನಡೆಸಿ, ಹಲ್ಲೆ ಮಾಡಿದ ಘಟನೆ ತಾಲೂಕಿನ ಕಾನಗೋಡಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಯೋಧ ರಂಗನಾಥ ಆಚಾರಿ, ಆತನ ತಂದೆ ಕೃಷ್ಣ ಆಚಾರಿ, ತಾಯಿ ರಾಧಾ ಆಚಾರಿ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಗಂಭೀರವಾಗಿ ಹಲ್ಲೆಗೊಳಗಾದ ಮೂವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.ಕಾನಗೋಡಿನ ಗೋಪಾಲ ನಾಯ್ಕ, ತಿಮ್ಮಪ್ಪ ನಾಯ್ಕ ಕುಟುಂಬದಿಂದ ಹಲ್ಲೆ ನಡೆದಿದ್ದು, ಯೋಧ ರಂಗನಾಥ್ ೫ ವರ್ಷದ ಹಿಂದೆ ನಾಗೇಶ ಶೆಟ್ಟಿ ಎಂಬವರಿಂದ ಜಾಗ ತೆಗೆದುಕೊಂಡು ಮನೆ ಕಟ್ಟಿದ್ದರು. ಆದರೆ ಮೂರು ಗುಂಟೆ ಜಾಗದಲ್ಲಿದ್ದ ಮನೆಯ ಜಾಗದಲ್ಲಿ ತಮ್ಮದೂ ಪಾಲಿದೆ ಎಂದು ಗೋಪಾಲ ನಾಯ್ಕ, ತಿಮ್ಮಪ್ಪ ನಾಯ್ಕ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಮನೆಯ ಜಾಗ ಇವರದ್ದೆಂದು ತೀರ್ಪು ಬಂದಿದ್ದು, ಇಂಜಂಕ್ಷನ್ ಆರ್ಡರ್ ತೆಗೆದುಕೊಂಡು ಮನೆ ಪ್ರವೇಶ ಮಾಡಿದ್ದರು. ಈ ವೇಳೆ ೫೦ ಜನರ ಗುಂಪು ಕಟ್ಟಿಕೊಂಡು ಬಂದು ಮನೆಯ ಕಾಂಪೌಂಡ್ ಕಿತ್ತುಹಾಕಿ ಮನೆಯ ವಸ್ತುಗಳನ್ನು ನಾಶಪಡಿಸಿ ದೊಣ್ಣೆಯಿಂದ ಮೂವರ ಮೇಲೆ ಹಲ್ಲೆ ಮಾಡಲಾಗಿದೆ.ದೂರು, ಪ್ರತಿ ದೂರು: ಜಾಗದ ವಿಷಯಕ್ಕೆ ಸಂಬಂಧಿಸಿದ ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧನ ಮನೆಗೆ ೨೫- ೩೦ ಜನರು ಸೇರಿಕೊಂಡು ಅಕ್ರಮ ಪ್ರವೇಶ ಮಾಡಿ, ಮನೆಯಲ್ಲಿದ್ದ ಕೆಲ ವಸ್ತುಗಳನ್ನು ಹಾನಿಪಡಿಸಿ, ಯೋಧ, ಆತನ ತಂದೆ-ತಾಯಿಯ ಮೇಲೆ ಹಲ್ಲೆ ನಡೆಸಿದ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಕಾನಗೋಡದ ತಿಮ್ಮಪ್ಪ ದೇವಾ ನಾಯ್ಕ, ರತ್ನಾಕರ ದೇವಾ ನಾಯ್ಕ, ಗೋಪಾಲ ನಾಯ್ಕ, ಪ್ರಕಾಶ ನಾಯ್ಕ, ಗಣೇಶ ನಾಯ್ಕ, ಗಣಪತಿ ನಾಯ್ಕ, ಮೋಹನ ನಾಯ್ಕ, ಶೈಲಾ ನಾಯ್ಕ, ಗೋವಿಂದ ನಾಯ್ಕ, ಕಿರಣ ನಾಯ್ಕ, ನಿರಂಜನ ನಾಯ್ಕ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ಈ ಕುರಿತು ರಂಗನಾಥ ಕೃಷ್ಣ ಆಚಾರಿ(೩೨) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರತಿದೂರು: ಮನೆಗೆ ಅಕ್ರಮ ಪ್ರವೇಶ ಮಾಡಿ, ಮಾರಕಾಸ್ತ್ರಗಳಿಂದ ಐವರ ಮೇಲೆ ಹಲ್ಲೆ ನಡೆಸಿದ ಆರು ವ್ಯಕ್ತಿಗಳ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿದ್ದಾಪುರ ತಾಲೂಕಿನ ಬಾಳೂರನ ಯೋಧ ರಂಗನಾಥ ಕೃಷ್ಣಾ ಆಚಾರಿ (೩೦) ಕೃಷ್ಣಾ ಆಚಾರಿ ( ೬೫) ರಾಧಾ ಆಚಾರಿ (೪೫) ಕಾನೋಡನ ಗಜಾನನ ವೆಂಕಟ್ರಮಣ ಹೆಗಡೆ, ಶ್ರೀಪಾದ ರಾಮಕೃಷ್ಣ ಹೆಗಡೆ, ಲಕ್ಷ್ಮೀ ನಾರಾಯಣ ಹೆಗಡೆ ಹಲ್ಲೆ ನಡೆಸಿದ ಆರೋಪಿತರಾಗಿದ್ದಾರೆ. ಕಾನಗೋಡನ ಯಶೋದಾ ಬಂಗಾರ್ಯ ನಾಯ್ಕ, ಶೈಲಜಾ ಶ್ರೀಪಾದ ನಾಯ್ಕ, ತಿಮ್ಮಪ್ಪ ದ್ಯಾವಾ ನಾಯ್ಕ, ಮಾಂತೇಶ ತಂದೆ ಬಂಗಾರ್ಯ ನಾಯ್ಕ, ಗೋವಿಂದ ಬಂಗಾರ್ಯ ನಾಯ್ಕ ಗಾಯಗೊಂಡಿದ್ದಾರೆ ಎಂದು ಪ್ರತಿದೂರು ದಾಖಲಾಗಿದೆ.