ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ವಿವಿ ಹಿತರಕ್ಷಣಾ ಬಳಗದ ಪ್ರಮುಖರನ್ನು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋದ ಶಾಸಕ ಮಂತರ್ ಗೌಡ ಕೊಡಗು ವಿವಿಯನ್ನು ಉಳಿಸುವ ಮೂಲಕ ಸೂಕ್ತ ಅನುದಾನ ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಕೋರಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಹಿಂದಿನ ಸರ್ಕಾರ ರಾಜಕಾರಣ ಮಾಡಲು ಅನಗತ್ಯವಾಗಿ ನೂತನ ವಿವಿಗಳನ್ನು ತೆರೆದು ಗೊಂದಲ ಸೃಷ್ಟಿ ಮಾಡಿದ್ದಾರೆ. ಈಗ ಅವುಗಳಿಗೆ ಅನುದಾನ ಕೊಡಲು ಸಾಧ್ಯವೇ ಎಂದಾಗ ಶಾಸಕರಾದ ಮಂತರ್ ಗೌಡ ಕೊಡಗು ವಿವಿ ಉಳಿಯಲೇಬೇಕು. ಕೊಡಗು ವಿವಿಗೋಸ್ಕರ ತನ್ನ ಶಾಸಕರ ಅನುದಾನವನ್ನು ಕೊಡಲು ತಾನು ಸಿದ್ದ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.ಇದಕ್ಕೆ ಪೂರಕವಾಗಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಸ್ಪಂದಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿವಿಗೆ ಸಂಯೋಜಿತಗೊಂಡ ಕೆಲವು ಬೋಧಕ ವರ್ಗದವರು ಮಂಗಳೂರು ವಿವಿಯಲ್ಲಿ ಕೊಡಗು ವಿಲೀನಗೊಳಿಸುವಂತೆ ಪತ್ರ ಬರೆದು ಸರ್ಕಾರಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದ ಉಪಮುಖ್ಯಮಂತ್ರಿಗಳು ತಮ್ಮ ಕ್ಷೇತ್ರದ ಕೋರಿಕೆಯನ್ನು ಸರ್ಕಾರ ಕಡೆಗಣಿಸುವುದಿಲ್ಲ ಎಂಬ ಭರವಸೆಯನ್ನು ಶಾಸಕರೊಂದಿಗೆ ನಿಯೋಗಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಇರುವ ವಿವಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ವಿವಿ ಹಿತರಕ್ಷಣಾ ಬಳಗದ ಗೌರವಾಧ್ಯಕ್ಷರಾದ ವಿ ಪಿ ಶಶಿಧರ್, ಹಿರಿಯ ವಕೀಲರಾದ ಹೆಚ್ ಎಸ್ ಚಂದ್ರ ಮೌಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ ಪಿ ಚಂದ್ರಕಲಾ ಉಪಮುಖ್ಯಮಂತ್ರಿಗಳನ್ನು ಕೋರಿದ್ದಾರೆ.
ನಿಯೋಗದಲ್ಲಿ ಉದ್ಯಮಿ ನಾಪಂಡ ಮುತ್ತಪ್ಪ, ಕುಶಾಲನಗರ ವಿವೇಕಾನಂದ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಎನ್ ಎನ್ ಶಂಭುಲಿಂಗಪ್ಪ ಬಳಗದ ಅಧ್ಯಕ್ಷರಾದ ಕೆ ಎಸ್ ಕೃಷ್ಣೇಗೌಡ, ಕರವೇ ರಾಜ್ಯ ಸಂಚಾಲಕಿ ದೀಪ ಪೂಜಾರಿ, ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ್ ಗುಂಡೂರಾವ್ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಉಪನ್ಯಾಸಕ ಡಾ ಜಮೀರ್ ಅಹ್ಮದ್, ಎಚ್ ಎನ್ ರಾಜಶೇಖರ್ ಟಿ ಕೆ ಪಾಂಡುರಂಗ ಟಿ ಬಿ ಜಗದೀಶ್ ಕೆ ಎಸ್ ಮೂರ್ತಿ ಮತ್ತಿತರರು ಇದ್ದರು.