ಕಲ್ಲುಗಣಿಗಾರಿಕೆಗೆ ಅವಕಾಶ ನೀಡದಂತೆ ಆಗ್ರಹ

KannadaprabhaNewsNetwork |  
Published : Oct 29, 2024, 01:07 AM IST
28ಕೆಆರ್ ಎಂಎನ್ 4.ಜೆಪಿಜಿರಾಮನಗರ ತಾಲೂಕು ಸುಗ್ಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಹಸೀಲ್ದಾರ್ ತೇಜಸ್ವಿನಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಮನಗರ: ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಸರ್ವೆ ನಂ.71 ಮತ್ತು 74ರಲ್ಲಿ ಕಲ್ಲು ಗಣಿಗಾರಿಕೆ ಸ್ಥಳ ಮಹಜರಿಗೆ ಆಗಮಿಸಿದ್ದ ತಹಸೀಲ್ದಾರ್ ಹಾಗೂ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ಗ್ರಾಮಸ್ಥರು ಆಗ್ರಹಿಸಿದರು.

ರಾಮನಗರ: ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಸರ್ವೆ ನಂ.71 ಮತ್ತು 74ರಲ್ಲಿ ಕಲ್ಲು ಗಣಿಗಾರಿಕೆ ಸ್ಥಳ ಮಹಜರಿಗೆ ಆಗಮಿಸಿದ್ದ ತಹಸೀಲ್ದಾರ್ ಹಾಗೂ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ಗ್ರಾಮಸ್ಥರು ಆಗ್ರಹಿಸಿದರು.

ಸುಗ್ಗನಹಳ್ಳಿ ಬಳಿಯ ಕಲ್ಲುಗಣಿಗಾರಿಕೆಗೆ ಗುರುತಿಸಿರುವ ಸ್ಥಳ ಮಹಜರಿಗೆ ತಹಸೀಲ್ದಾರ್ ತೇಜಸ್ವಿನಿ ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಆಗಮಿಸಿದ ವೇಳೆಯಲ್ಲಿ ಗ್ರಾಮಸ್ಥರು ಪ್ರತಿಭಟಿಸಿ ನೈಜ ವರದಿ ನೀಡುವಂತೆ ಒತ್ತಾಯಿಸಿದರು.

ಮಾಯಗಾನಹಳ್ಳಿ ಪಿ.ನಾಗರಾಜು ಪತ್ನಿ ಜಯಶ್ರೀ ಮತ್ತು ಡಿ.ಸಿ.ಕುಮಾರ್ ಎಂಬುವರು ಸುಗ್ಗನಹಳ್ಳಿ ಗ್ರಾಮದ ಸರ್ವೆ ನಂ.71 ಮತ್ತು 74 ರಲ್ಲಿ ಕಲ್ಲುಗಣಿಗಾರಿಕೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿಕೊಂಡಿದ್ದಾರೆ. ಸದರಿ ಸ್ಥಳದ ಆಸುಪಾಸಿನಲ್ಲಿ ಸುಮಾರು 300 ರಿಂದ 400 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಿಂದ ಕಂಗೊಳಿಸುತ್ತಿದೆ.

ಮಾವು ಬೆಳೆಯಿಂದ ಗ್ರಾಮದಲ್ಲಿ ಶೇ. 90ರಷ್ಟು ಜನ ಲಕ್ಷಾಂತರ ರು., ಆದಾಯಗಳಿಸಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಸದರಿ ಗೋಮಾಳದ ಜಮೀನಿನ ಆಸುಪಾಸಿನಲ್ಲಿ ಸುಮಾರು 50ರಿಂದ 60 ಎಕರೆ ಜಮೀನಿನಲ್ಲಿ ಅಡಿಕೆ ಮತ್ತು ರೇಷ್ಮೆ ಬೆಳೆ ಬೆಳೆಯುತ್ತಾರೆ. ಅದರಿಂದ ಅವರ ಜೀವನ ನಿರ್ವಹಣೆ ನಡೆಯುತ್ತಿದ್ದು, ಗಣಿಗಾರಿಕೆಗೆ ಅನುಮತಿ ಕೋರಿರುವ ಸ್ಥಳಕ್ಕೆ ಸುಮಾರು 30ರಿಂದ 40 ಅಡಿಗಳಷ್ಟು ದೂರದಲ್ಲಿ 8 ವಾಸದ ಮನೆಗಳಿದ್ದು, ಅಲ್ಲಿ ವಾಸವಿರುವ ಕುಟುಂಬಗಳ ಸುಮಾರು 10ರಿಂದ 15 ಜನ ಮಕ್ಕಳು ಶಾಲೆಗೆ ಪ್ರತಿದಿನ ಓಡಾಡುತ್ತಿರುತ್ತಾರೆ. ಸದರಿ ಗೋಮಾಳದ ಜಮೀನುಗಳು ಸುತ್ತ ಮುತ್ತ ಸುಮಾರು 15 ರಿಂದ 16 ಗ್ರಾಮಗಳಿಂದ ಸುತ್ತುವರಿದಿವೆ.

ಒಂದು ವೇಳೆ ಸದರಿ ಗೋಮಾಳ ಜಾಗದಲ್ಲಿ ಕಲ್ಲುಗಣಿಗಾರಿಕೆ ನಡೆದ ಪಕ್ಷದಲ್ಲಿ ಅದರಿಂದ ಹೊರಬರುವ ಧೂಳಿನಿಂದ, ಶಬ್ದ ಮತ್ತು ವಾಹನ ದಟ್ಟಣೆಯಿಂದ ಸುತ್ತಮುತ್ತಲಿನ ಜಮೀನಿನಲ್ಲಿರುವ ಮಾವಿನಬೆಳೆ ಮತ್ತು ರೇಷ್ಮೆ ಬೆಳೆಗಳು ಹಾಳಾಗುತ್ತವೆ. ಯಾವುದೇ ಇಳುವರಿಗಳು ಬರುವುದಿಲ್ಲ. ಹಾಗೂ ಕಲುಷಿತ ವಾತಾವರಣದಿಂದ ಜನ ಹಾಗೂ ಜನವಾರುಗಳು ಅನಾರೋಗ್ಯಕ್ಕೆ ತುತ್ತಾಗಿ ಜೀವನ ನಡೆಸಲು ಕಷ್ಟಸಾಧ್ಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಂತೆ ಸರ್ವೆ ನಂ 67/1 ರಲ್ಲಿ ಪ್ರಸಿದ್ಧ ಮಾರಮ್ಮ ದೇವಿಯ ದೇವಸ್ಥಾನವಿದ್ದು, ಈ ದೇವಸ್ಥಾನ ಸುಗ್ಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಆರಾಧ್ಯ ದೈವವಾಗಿದೆ. ಸದರಿ ಕಲ್ಲುಗಣಿಗಾರಿಕೆಯಿಂದ ದೇವಸ್ಥಾನದ ಅವನತಿ ಹೊಂದಿದ ಪಕ್ಷದಲ್ಲಿ ಸುಮಾರು 3 ತಲೆಮಾರುಗಳಿಂದ ಉಳಿಸಿ- ಕಾಪಾಡಿಕೊಂಡು ಬಂದಿರುವ ದೈವ ನಂಬಿಕೆಗೆ ಪೆಟ್ಟು ಉಂಟಾಗಿ ಜಮಸಾಮಾನ್ಯರ ಧಾರ್ಮಿಕ ಹಕ್ಕಿಗೆ ಚ್ಯುತಿ ಉಂಟಾಗುತ್ತದೆ. ಸದರಿ ಸ್ಥಳದಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿ ಸರ್ಕಾರದಿಂದ ಚೆಕ್ ಡ್ಯಾಂ ನಿರ್ಮಾಣವಾಗಿದ್ದು, ಸುಮಾರು 12 ಎಕರೆ ಪ್ರದೇಶದಲ್ಲಿ ನೀರು ವರ್ಷವಿಡೀ ನೀರು ತುಂಬಿಕೊಂಡಿರುತ್ತದೆ. ಏನಾದರೂ ಕಲ್ಲುಗಾರಿಕೆಯಿಂದ ಸಿಡಿಯುವ ಸಿಡಿಮದ್ದಿನ ಶಬ್ದಕ್ಕೆ ಸದರಿ ಚೆಕ್ ಡ್ಯಾಂ ಹಾಳಾದರೆ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಅಂತರ್ಜಲ ಅಭಾವ ತಲೆದೋರುತ್ತದೆ ಎಂದು ಗ್ರಾಮಸ್ಥರು ಭೀತಿ ವ್ಯಕ್ತಪಡಿಸಿದರು.

ಆದ್ದರಿಂದ ತಾವು ಇಲ್ಲಿನ ನೈಜ ವರದಿ ನೀಡಬೇಕು ಸದರಿ ಅರ್ಜಿಯನ್ನು ತಿರಸ್ಕರಿಸಬೇಕು. ರಾಜಕೀಯ ಹಿತಾಶಕ್ತಿಗೆ ಬದ್ದರಾಗಿ ಸ್ಥಳೀಯ ಜನರ ವಿರುದ್ಧವಾಗಿ ವರದಿ ನೀಡಬಾರದು. ಜನರಿಗೆ ಪೂರಕವಾಗಿರುವಂತ ವರದಿ ನೀಡಿ ಗಣಿಗಾರಿಕೆಗೆ ಅನುಮತಿ ನೀಡದಂತೆ ತಾವು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ತೇಜಸ್ವಿನಿ, ವಾಸ್ತವ ವರದಿ ನೀಡುವ ಭರವಸೆಯನ್ನು ಸಾರ್ವಜನಿಕರಿಗೆ ನೀಡಿದರು.

ಪ್ರತಿಭಟನೆಯಲ್ಲಿ ವಕೀಲ ರವಿ, ಎಸ್.ಆರ್. ರಾಮಕೃಷ್ಣಯ್ಯ, ಗ್ರಾಪಂ ಅಧ್ಯಕ್ಷೆ ಅರ್ಪಿತಾ , ಉಪಾಧ್ಯಕ್ಷ ಚಿಕ್ಕಸ್ವಾಮಿ, ಲೋಕೇಶ್, ಬೈರಪ್ಪ, ಶಿವರಾಮು, ಸುರೇಶ್ ಬಾಬು, ರವಿಚಂದ್ರೇಗೌಡ, ಗೋಪಾಲಕೃಷ್ಣ, ವೀರಬಸವಯ್ಯ ಮತ್ತಿತರರು ಭಾಗವಹಿಸಿದ್ದರು.

28ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ತಾಲೂಕು ಸುಗ್ಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಹಸೀಲ್ದಾರ್ ತೇಜಸ್ವಿನಿ ಅವರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಟಿಯುನಿಂದ ಗುಣಮಟ್ಟದ ಎಂಜಿನಿಯರುಗಳ ನೀಡುವ ಭರವಸೆ
ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಿ