ಕನ್ನಡಪ್ರಭ ವಾರ್ತೆ ಶಿರಾಶಿರಾ ತಾಲೂಕಿನ ಬಾಳಬಸವನಹಳ್ಳಿಯ ಶಾಲೆಯನ್ನು ಬ್ರಹ್ಮಸಂದ್ರ ಕೆಪಿಎಸ್ ಮ್ಯಾಗ್ನೆಟ್ ಗೆ ವಿಲೀನ ಮಾಡಬಾರದೆಂದು ಎಐಡಿಎಸ್‌ಒ ಜಿಲ್ಲಾ ಶಾಖೆಯಿಂದ ಶಿರಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ, ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಸೆಕ್ರಟೆರಿಯಟ್ ಸದಸ್ಯರಾದ ಭರತ್, ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಘೋಷಿಸಿರುವಂತೆ ಜೂನ್ ನಿಂದಲೇ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಈ ಶಾಲೆಗಳಲ್ಲಿ ೩ ರಿಂದ ೫ ಕಿ. ಮೀ ವ್ಯಾಪ್ತಿಯ ಶಾಲೆಗಳನ್ನು ವಿಲೀನಗೊಳಿಸಲಾ ಗುವುದೆಂದು ೧೫ ಅಕ್ಟೋಬರ್ ೨೦೨೫ರ ಆದೇಶ ಮಾಡಿದ್ದಾರೆ. ಈ ನೀತಿಯ ಪ್ರಕಾರ ಬಾಳಬಸವನಹಳ್ಳಿ ಶಾಲೆಯನ್ನು ಬ್ರಹ್ಮಸಂದ್ರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವಿಲೀನ ಮಾಡಲು ಹೊರಟಿದೆ. ನಾವುಗಳೇ ಹೋಗಲು ಸರಿಯಾದ ಬಸ್ ಸೌಲಭ್ಯ ಇಲ್ಲ. ಇಂತ ಸಂದರ್ಭದಲ್ಲಿ ನಮ್ಮ ಮಕ್ಕಳೇ ಹೇಗೆ ಹೋಗಲು ಸಾಧ್ಯ. ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು, ಸರ್ಕಾರಿ ಶಾಲೆಗಳನ್ನು ಬೆಳೆಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷರಾದ ರತ್ನಮ್ಮ , ಸದಸ್ಯರಾದ ರೇಖಾ, ಪವಿತ್ರ ಮಹಾಲಕ್ಷ್ಮಿ, ಮಂಜುನಾಥ ಸೇರಿದಂತೆ ಹಲವರು ಹಾಜರಿದ್ದರು.