ಕನ್ನಡಪ್ರಭ ವಾರ್ತೆ ಶಿರಾ ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಎಚ್ಚೆತ್ತುಕೊಂಡಿರುವ ಶಿರಾ ನಗರಸಭೆಯ ಅಧಿಕಾರಿಗಳು, ನಗರದ ಪ್ರಮುಖ ರಾಜಕಾಲುವೆಗಳ ಸ್ವಚ್ಛತಾ ಕಾರ್ಯಕ್ಕೆ ಭರದಿಂದ ಚಾಲನೆ ನೀಡಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ರಾಜಕಾಲುವೆಗಳು ಕಟ್ಟಿಕೊಂಡು ಸಾರ್ವಜನಿಕರಿಗೆ ಎದುರಾಗುತ್ತಿದ್ದ ದೊಡ್ಡ ಮಟ್ಟದ ಅನಾಹುತ ಹಾಗೂ ತೊಂದರೆಗಳನ್ನು ತಪ್ಪಿಸಲು ನಗರಸಭೆ ಈ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ನಗರದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ರಾಜಕಾಲುವೆಗಳು ಹೂಳು ಮತ್ತು ಕಸದಿಂದ ತುಂಬಿ ಹೋಗಿದ್ದವು. ಇದರಿಂದಾಗಿ ಮಳೆ ಬಂದಾಗ ನೀರು ಸರಾಗವಾಗಿ ಹರಿಯದೆ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತಿತ್ತು. ಈ ಸಮಸ್ಯೆಯ ಗಂಭೀರತೆಯನ್ನು ಅರಿತ ನಗರಸಭೆ ಪೌರಾಯುಕ್ತರು, ಅಧಿಕಾರಿಗಳು ಹಾಗೂ ಪೌರಕಾರ್ಮಿಕರ ತಂಡವು ಮಳೆಗಾಲ ಆರಂಭವಾಗುವ ಮುಂಚಿತವಾಗಿಯೇ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಪ್ರಸ್ತುತ ನಗರದ ರಂಗನಾಥ ಟಾಕೀಸ್ ಹಿಂಭಾಗ ಹಾಗೂ ಹಳೇ ರಾಷ್ಟೀಯ ಹೆದ್ದಾರಿ ರಸ್ತೆ ಸೇರಿದಂತೆ ನಗರದ ವಿವಿಧೆಡೆ ರಾಜಕಾಲುವೆಗಳಲ್ಲಿ ತುಂಬಿದ್ದ ಕಸ, ಹೂಳು, ಗಿಡಗಂಟೆಗಳನ್ನು ತೆರವುಗೊಳಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಪ್ರವಾಹದಂತಹ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯು ಅತ್ಯಂತ ಜವಾಬ್ದಾರಿಯುತ ಹಾಗೂ ಶ್ಲಾಘನೀಯ ಕೆಲಸ ನಿರ್ವಹಿಸುತ್ತಿದೆ. ಪೌರಾಯುಕ್ತ ರುದ್ರೇಶ್ ಅವರು ಪ್ರತಿ ವರ್ಷವೂ ಸಹ ಮಳೆಗಾಲಕ್ಕೂ ಮುನ್ನ ಸಾರ್ವಜನಿಕರ ದೂರುಗಳಿಗೆ ಕಾಯದೆ, ಮಳೆಗಾಲದ ಮುನ್ಸೂಚನೆ ಅರಿತು ಸ್ವತಃ ತಾವೇ ಮುಂಚೂಣಿಯಲ್ಲಿ ನಿಂತು ಸ್ವಚ್ಛತಾ ಕಾರ್ಯ ಮಾಡಿಸುತ್ತಾರೆ. ಪೌರಾಯುಕ್ತರ ದಕ್ಷ ನಡೆ ಹಾಗೂ ದೂರದೃಷ್ಟಿಯ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಧಿಕಾರಿಗಳು ಮತ್ತು ಪೌರಕಾರ್ಮಿಕರ ಈ ಜಂಟಿ ಕಾರ್ಯಾಚರಣೆ ಸಾರ್ವಜನಿಕರ ನೆಮ್ಮದಿಗೆ ಕಾರಣವಾಗಿದೆ.